ಭಾರತವು ಕೊನೆಗೂ ಕುಸ್ತಿಯಲ್ಲಿ ಪದಕ ಗೆದ್ದ ಸಾಧನೆ ಮಾಡಿತು. ಕುಸ್ತಿಪಟು ವಿನೇಶ್ ಫೋಗಟ್ ಅವರ ಪ್ರಕರಣದಿಂದ ಇಡೀ ಭಾರತಕ್ಕೆ ಬೇಸರವಾಗಿತ್ತು. ಈಗ ಅಮನ್ ಸೆಹ್ರಾವತ್ ಕುಸ್ತಿಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಸಮಾಧಾನ ನೀಡಿದ್ದಾರೆ. ಈ ಮೂಲಕ ದೇಶಕ್ಕೆ 6ನೇ ಪದಕ ಸಿಗುವಂತೆ ಮಾಡಿದ್ದಾರೆ.
21 ವರ್ಷದ ಅಮನ್ ಸೆಹ್ರಾವತ್ 13-5 ಅಂತರದಲ್ಲಿ ಡೇರಿಯನ್ ಕ್ರೂಜ್ ಅವರನ್ನು ಸೋಲಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಆರನೇ ಪದಕವನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ.
ಚೊಚ್ಚಲ ಒಲಿಂಪಿಕ್ಸ್ ಆಡುತ್ತಿರುವ ಅಮನ್ ಸೆಹ್ರಾವತ್ ಪುರುಷರ 57 ಕೆಜಿ ತೂಕ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಪೋರ್ಟೊ ರಿಕೊ ಕುಸ್ತಿಪಟುವನ್ನು 13-5 ರಿಂದ ಏಕಪಕ್ಷೀಯವಾಗಿ ಸೋಲಿಸುವ ಮೂಲಕ ಅಮನ್ ಕಂಚಿನ ಪದಕ ಗೆದ್ದಿದ್ದಾರೆ.
ಒಟ್ಟಾರೆ ಈ ಕ್ರೀಡಾಕೂಟದಲ್ಲಿ ಇದು ಭಾರತಕ್ಕೆ 5 ನೇ ಕಂಚಿನ ಪದಕವಾಗಿದ್ದರೆ, ಕುಸ್ತಿಯಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕವಾಗಿದೆ. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಎಂಟನೇ ಕುಸ್ತಿಪಟು ಎನ್ನುವ ದಾಖಲೆಗೆ ಅಮನ್ ಸೆಹ್ರಾವತ್ ಕಾರಣವಾಗಿದ್ದಾರೆ. ಅಲ್ಲದೇ, ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಐದನೇ ಭಾರತೀಯ ಕುಸ್ತಿಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.