- ಹೈದರಾಬಾದ್‌ನಲ್ಲೊಂದು ಘೋರ ಕೃತ್ಯ: 3 ದಿನ ಮಾಂಸ ಬೇಯಿಸಿ ಕೊನೆಗೆ ಕೆರೆಗೆ ಎಸೆದ ದುರುಳ
ಹೈದರಾಬಾದ್: ಮಾಜಿ ಸೈನಿಕನೊಬ್ಬ ತನ್ನ ಪತ್ನಿಯನ್ನು ಕೊಂದು, ದೇಹವನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ, ಅವುಗಳನ್ನು ಪ್ರೆಷರ್ ಕುಕ್ಕರ್ ನಲ್ಲಿ ಬೇಯಿಸಿದ ಅಮಾನುಷ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ 45 ವರ್ಷದ ಗುರುಮೂರ್ತಿ ಎಂಬಾತನನ್ನು ಬಂಧಿಸಲಾಗಿದ್ದು, ಪೊಲೀಸ್ ವಿಚಾರಣೆಯ ವೇಳೆ ತನ್ನೆಲ್ಲ ಕೃತ್ಯವನ್ನೂ ಆತ ಬಾಯಿಬಿಟ್ಟಿದ್ದಾನೆ. - ಮೃತ ಮಹಿಳೆಯನ್ನು ವೆಂಕಟ ಮಾಧವಿ(35) ಎಂದು ಗುರುತಿಸಲಾಗಿದೆ. ಮಾಧವಿ ಅವರು ಕಾಣೆಯಾಗಿರುವ ಬಗ್ಗೆ ಅವರ ಕುಟುಂಬಸ್ಥರು ಜನವರಿ 16ರಂದು ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿ ತನಿಖೆ ಆರಂಭಿಸಿದ ಪೊಲೀಸರಿಗೆ ಮಾಧವಿಯ ಪತಿಯ ಮೇಲೆ ಅನುಮಾನ ಮೂಡತೊಡಗಿತ್ತು. ಮಾಧವಿ ಅವರ ಹೆತ್ತವರು ದೂರು ಕೊಡಲು ಪೊಲೀಸ್ ಠಾಣೆಗೆ ಬಂದಾಗ ಅವರೊಂದಿಗೆ ಗುರುಮೂರ್ತಿಯೂ ಬಂದಿದ್ದ. ಆದರೆ, ಶಂಕೆಯ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ತನ್ನ ಘೋರ ಕೃತ್ಯವನ್ನು ಗುರುಮೂರ್ತಿ ಬಹಿರಂಗಪಡಿಸಿದ್ದಾನೆ ಎಂದು ಪೊಲೀಸ್ ಇನ್ ಸ್ಪೆಕ್ಟರ್ ನಾಗರಾಜು ತಿಳಿಸಿದ್ದಾರೆ.
- ಮೂಳೆಗಳನ್ನು ಕುಟ್ಟಾಣಿಯಲ್ಲಿ ಪುಡಿಗೈದಿದ್ದ:
ಮೊದಲಿಗೆ ಪತ್ನಿ ಮಾಧವಿಯನ್ನು ಕೊಂದ ಗುರುಮೂರ್ತಿ, ನಂತರ ಶವವನ್ನು ಬಾತ್ ರೂಂಗೆ ಒಯ್ದು, ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ತುಂಡರಿಸಿ, ಸ್ವಲ್ಪ ಸ್ವಲ್ಪವೇ ಮಾಂಸವನ್ನು ಪ್ರೆಷರ್ ಕುಕ್ಕರ್ ನಲ್ಲಿ ಬೇಯಿಸಿದ್ದ. ನಂತರ ಮೂಳೆಗಳನ್ನಷ್ಟೇ ಪ್ರತ್ಯೇಕವಾಗಿಸಿ, ಅವುಗಳನ್ನು ಕುಟ್ಟಾಣಿಯಲ್ಲಿ ಕುಟ್ಟಿ ಪುಡಿಗೈದಿದ್ದ. ಬಳಿಕ ಮತ್ತೊಮ್ಮೆ ಆ ಪುಡಿಯನ್ನೂ ಬೇಯಿಸಿದ್ದ. ಮಾಂಸ ಹಾಗೂ ಮೂಳೆಯನ್ನು ಸತತ 3 ದಿನಗಳ ಕಾಲ ಹಲವು ಬಾರಿ ಬೇಯಿಸಿದ ಬಳಿಕ, ಅವುಗಳನ್ನು ಪ್ಯಾಕ್ ಮಾಡಿ ಹೊತ್ತೊಯ್ದು, ಮೀರ್ ಪೇಟ್ ಸರೋವರದಲ್ಲಿ ಬಿಸಾಕಿದ್ದ. ಕೊಲೆಯನ್ನು ಮುಚ್ಚಿಡುವ ಉದ್ದೇಶದಿಂದ ಇಷ್ಟೆಲ್ಲ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಚ್ಚರಿಯೆಂದರೆ ಆರೋಪಿ ಗುರುಮೂರ್ತಿ ಮಾಜಿ ಸೈನಿಕ. ಪ್ರಸ್ತುತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆ(ಡಿಆರ್‌ಡಿಒ)ಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ದಂಪತಿಗೆ ಇಬ್ಬರು(ಗಂಡು ಮತ್ತು ಹೆಣ್ಣು) ಮಕ್ಕಳಿದ್ದಾರೆ. ದಂಪತಿಯ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಆದರೆ, ಕೊಲೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.