ವಿರಾಕ್ ಕೊಹ್ಲಿ, ಭಾರತ ಅಷ್ಟೇ ಯಾಕೆ ವಿಶ್ವ ಕ್ರಿಕೆಟ್ ನ ದಿಗ್ಗಜ. ಆರ್ ಸಿಬಿ ತಂಡದ ಹಾಟ್ ಫೇವರೀಟ್. ಇದೇ ವಿರಾಟ್ ಕೊಹ್ಲಿ ಈಗ ದೊಡ್ಡದೊಂದು ನಿರ್ಧಾರ ಕೈಗೊಂಡಿದ್ದಾರೆ. ಕ್ರೀಡಾ ಉಡುಪು ಮತ್ತು ಪರಿಕರಗಳ ತಯಾರಿಕಾ ಕಂಪನಿ ಪೂಮಾ ಜೊತೆಗಿನ ತಮ್ಮ ಓಡನಾಟವನ್ನು ಅಂತ್ಯಗೊಳಿಸಿದ್ದಾರೆ. ಈ ಮೂಲಕ 8 ವರ್ಷಗಳ ಪೂಮಾ ಜೊತೆಗಿನ ಕೊಹ್ಲಿ ಪಯಣ ಅಂತ್ಯವಾಗಿದೆ.
ಸ್ವಂತ ಕಂಪನಿ ಆರಂಭಿಸಿದ್ರಾ ಡೆಲ್ಲಿ ಡ್ಯಾಷರ್?
ಪೂಮಾ ಜೊತೆಗಿನ ಅನುಬಂಧ ಕಳಚಿಕೊಂಡ ಬೆನ್ನಲ್ಲೇ ವಿರಾಟ್ ಕೊಹ್ಲಿ ಹೊಸ ಘೋಷಣೆಯೊಂದನ್ನು ಮಾಡಿದ್ದಾರೆ. ಹೌದು..ಪೂಮಾ ಜೊತೆ ಕಳೆದ 8 ವರ್ಷ ಕೊಹ್ಲಿ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಈ ಒಪ್ಪಂದಕ್ಕೆ 110 ಕೋಟಿ ಪಡೆದಿದ್ದರು ಕೊಹ್ಲಿ. ಆದರೆ, ಈಗ ಈ ಒಪ್ಪಂದ ಅಂತ್ಯವಾದ ಬೆನ್ನಲ್ಲೇ ವಿರಾಟ್ ತಮ್ಮದೇ ಹೊಸ ಕ್ರೀಡಾ ಉಡುಪು ಮತ್ತು ಪರಿಕರಗಳ ಸಂಸ್ಥೆ ಒನ್ 8 ಸಂಸ್ಥೆಗೆ ಬೆನ್ನೆಲುಬಾಗುತ್ತಿದ್ದಾರೆ.
ಅಜಿಲಿಟಾಸ್ ಜೊತೆ ಕೊಹ್ಲಿ ಹೊಸ ಒಪ್ಪಂದ?
ಪೂಮಾ ಒಪ್ಪಂದ ಮುಕ್ತಾಯದ ಬೆನ್ನಲ್ಲೇ ವಿರಾಟ್ ಕೊಹ್ಲಿ ಮತ್ತೊಂದು ಖ್ಯಾತ ಸಂಸ್ಥೆ ಅಜಿಲಿಟಾಸ್ ಜೊತೆ ಕೈಜೋಡಿಸುವ ನಿರೀಕ್ಷೆ ಇದೆ. 2023ರಲ್ಲಿ ಇದೇ ಪೂಮಾ ಇಂಡಿಯಾದ ಮಾಜಿ ಉದ್ಯೋಗಿ ಹಾಗೂ ಆಗ್ನೇಯ ಏಷ್ಯಾ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಗಂಗೂಲಿಯವರಿಂದ ಅಜಿಲಿಟಾಸ್ ಆರಂಭವಾಗಿತ್ತು. ಈ ಅಜಿಲಿಟಾಸ್ ಕಂಪನಿ ರಿಟೇಲ್ ಕ್ರೀಡಾ ಉಡುಪುಗಳನ್ನು ಭಾರತ ಹಾಗೂ ವಿದೇಶಗಳಲ್ಲಿ ಮಾರಾಟ ಮಾಡುತ್ತಿದೆ. ಕಳೆದ ವರ್ಷ ಅಜಿಲಿಟಾಸ್, ಇಟೆಲಿಯನ್ ಕ್ರೀಡಾ ಬ್ರಾಂಡ್ ಲೊಟ್ಟೊದ ಸುಧೀರ್ಘ ಅವಧಿಯ ಲೈಸನ್ಸ್ ನ್ನು ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳಿಗೆ ಖರೀದಿಸಿತ್ತು.
ಇದೇ ಅಜಿಲಿಟಾಸ್ ಜೊತೆ ಸೇರಿ ಕೊಹ್ಲಿ ತಮ್ಮದೇ ಸಹ ಪಾಲುದಾರಿಕೆ ಇರುವ ಒನ್ 8 ಕಂಪನಿ ಮೂಲಕ ಬ್ರಾಂಡ್ ಮುನ್ನೆಲೆಗೆ ತರುತ್ತಿದ್ದಾರೆ. ಭಾರತದ ಮಾರುಕಟ್ಟೆಯಲ್ಲಿ ಕೊಹ್ಲಿಯ ಹೊಸ ಬ್ರಾಂಡ್ ಈಗಾಗಲೇ ನಿರೀಕ್ಷೆ ಹುಟ್ಟಿಸಿದ್ದು, ಮುಂದೆ ಎಷ್ಟರ ಮಟ್ಟಿಗೆ ಧೂಳ್ ಎಬ್ಬಿಸುತ್ತೆ ಅನ್ನೋ ಚರ್ಚೆ ಶುರುವಾಗಿದೆ. ಹಾಗೆ ನೋಡಿದರೆ, ಕೊಹ್ಲಿ ಕ್ಲಾಸಿಕ್ ಫಿಟ್ ನೆಸ್ ಅನ್ನೋ ಜಿಮ್ ನಲ್ಲಿ ಸಹಬಾಗಿತ್ವ ಹೊಂದಿದ್ದಾರೆ. ಡಿಜಿಟ್ ಇನ್ಷೂರೆನ್ಸ್, ಹಾಗೂ ಬೆಂಗಳೂರು ಸೇರಿದಂತೆ ಹಲವೆಡೆ ರೆಸ್ಟೋರೆಂಟ್ ಸರಣಿಯನ್ನೂ ಹೊಂದಿದ್ದಾರೆ. 35 ವರ್ಷದ ವಿರಾಟ್ ಸರಿಸುಮಾರು 1050 ಕೋಟಿ ಸಂಪತ್ತಿನ ಒಡೆಯ. ಮುಂದಿನ ದಿನಗಳಲ್ಲಿ ಕೊಹ್ಲಿ ಮತ್ತಷ್ಟು ಬ್ರಾಂಡ್ ಗಳಲ್ಲಿ ಬಂಡವಾಳ ಹೂಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.