ಪ್ಯಾರಿಸ್ ಒಲಿಂಪಿಕ್ಸ್ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 14 ದಿನಗಳು ಮುಕ್ತಾಯವಾಗಿವೆ. ಈಗ ಇನ್ನೂ ಎರಡು ದಿನಗಳು ಮಾತ್ರ ಉಳಿದಿವೆ. ಅಗ್ರಸ್ಥಾನಕ್ಕೇರಲು ಚೀನಾ ಹಾಗೂ ಯುಎಸ್ ಎ ನಡುವೆ ಪೈಪೋಟಿ ಏರ್ಪಟ್ಟಿದೆ.
ಉಭಯ ದೇಶಗಳು ಇಲ್ಲಿಯವರೆಗೆ 33 ಚಿನ್ನದ ಪದಕಕ್ಕೆ ಕೊರಳೊಡ್ಡಿವೆ. ಹೆಚ್ಚು ಬಂಗಾರದ ಪದಕ ಗೆಲ್ಲುವ ದೇಶ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದೆ. ಹೀಗಾಗಿ ಕೊನೆಯ ಎರಡು ದಿನಗಳಲ್ಲಿ ಈ ಬಾರಿಯ ಅಗ್ರಸ್ಥಾನಿ ಯಾರು ಎಂಬುವುದು ನಿರ್ಧಾರವಾಗುವ ಸಾಧ್ಯತೆಯಿದೆ.
ಆದರೆ, ಒಟ್ಟಾರೆ ಪದಕಗಳ ವಿಷಯದಲ್ಲಿ ಯುಎಸ್ಎ ಮೊದಲ ಸ್ಥಾನದಲ್ಲಿದೆ. ನೂರಕ್ಕೂ ಅಧಿಕ ಪದಕ ಗೆಲ್ಲುವ ಮೂಲಕ ಒಟ್ಟು ಸಂಖ್ಯೆಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನೊಂದೆಡೆ ಚೀನಾ 33 ಚಿನ್ನದ ಪದಕ ಗೆದ್ದರೂ, ಒಟ್ಟು ಪದಕ ಸಂಖ್ಯೆಯು 85 ನ್ನು ದಾಟಿಲ್ಲ.
ಯುಎಸ್ಎ ಬೆಳ್ಳಿ ಮತ್ತು ಕಂಚಿನ ವಿಭಾಗದಲ್ಲಿ ತಲಾ 39 ಪದಕಗಳನ್ನು ಗೆಲ್ಲುವ ಒಟ್ಟು ಪದಕಗಳ ಸಂಖ್ಯೆಯನ್ನು 111 ಕ್ಕೇರಿಸಿದೆ. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನೂರು ಪದಕಗಳನ್ನು ಗೆದ್ದ ಮೊದಲ ದೇಶ ಎಂಬ ಹೆಗ್ಗಳಿಕೆ ಯುಎಸ್ ಎ ಪಾಲಾಗಿದೆ. ಈ ಒಲಿಂಪಿಕ್ಸ್ ನಲ್ಲಿ ಒಟ್ಟು 6 ಪದಕಗಳನ್ನು ಗೆದ್ದಿರುವ ಭಾರತವು ಪದಕ ಪಟ್ಟಿಯಲ್ಲಿ 69ನೇ ಸ್ಥಾನದಲ್ಲಿದೆ. ಚಿನ್ನದ ಪದಕ ಗೆಲ್ಲದಿರುವುದಕ್ಕೆ ಭಾರತ ಹಿಂದುಳಿದಿದೆ. ಕೊನೆಯ ಎರಡು ದಿನಗಳಲ್ಲಿ ಭಾರತೀಯ ಕ್ರೀಡಾಪಟುಗಳು ಚಿನ್ನದ ಪದಕಕ್ಕೆ ಕೊರೊಳೊಡ್ಡಿದರೆ 40ರ ಒಳಗೆ ಸ್ಥಾನ ಪಡೆಯಬಹುದು.
• ಮನು ಭಾಕರ್: ಮಹಿಳೆಯರ 10 ಮೀ ಏರ್ ಪಿಸ್ತೂಲ್- ಕಂಚು
• ಮನು ಭಾಕರ್, ಸರಬ್ಜೋತ್ ಸಿಂಗ್: 10 ಮೀ ಏರ್ ಪಿಸ್ತೂಲ್ (ಮಿಶ್ರ ತಂಡ)- ಕಂಚು
• ಸ್ವಪ್ನಿಲ್ ಕುಸಾಲೆ: 50 ಮೀ ರೈಫಲ್ 3 ಸ್ಥಾನ- ಕಂಚು
• ಟೀಮ್ ಇಂಡಿಯಾ: ಪುರುಷರ ಹಾಕಿ- ಕಂಚು
• ನೀರಜ್ ಚೋಪ್ರಾ: ಪುರುಷರ ಜಾವೆಲಿನ್ ಥ್ರೋ- ಬೆಳ್ಳಿ
• ಅಮನ್ ಸೆಹ್ರಾವತ್: ಪುರುಷರ ಕುಸ್ತಿ ಫ್ರೀಸ್ಟೈಲ್ 57 ಕೆ.ಜಿ- ಕಂಚು ಇಲ್ಲಿಯವರೆಗೆ ಭಾರತದ ಪರ ಪದಕ ಗೆದ್ದ ಸಾಧನೆ ಮಾಡಿದ್ದಾರೆ.