ರಾಜ್ಯದಲ್ಲಿ ಕಸದ ಗುತ್ತಿಗೆಯಲ್ಲೂ ಕೋಟ್ಯಂತರ ರೂಪಾಯಿ ಲೂಟಿ ಹೊಡೆಯಲು ಮಾಸ್ಟರ್ ಪ್ಲ್ಯಾನ್ ನಡೆದಿದ್ದು, ಕೆಟಿಪಿಪಿ ಕಾಯ್ದೆ ಗಾಳಿಗೆ ತೂರಿ ಅಧಿಕಾರಿಗಳು ಮಹಾ ಅಕ್ರಮ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಕೇವಲ ಶೇ.5ರಷ್ಟು ಇರಬೇಕಿದ್ದ ಪ್ರೀಮಿಯಂ ದರವನ್ನು ಶೇ.14ಕ್ಕೆ ಹೆಚ್ಚಳ ಮಾಡಲಾಗಿದ್ದು, ಆರ್ಥಿಕ ಇಲಾಖೆಯ ಕಟ್ಟುನಿಟ್ಟಿನ ವಾರ್ನಿಂಗ್ ಹಾಗೂ ಎಚ್ಚರಿಕೆಯನ್ನೂ ಲೆಕ್ಕಿಸದೆ ಈ ಕಸದ ಟೆಂಡರ್ಗೆ ನಗರಾಭಿವೃದ್ಧಿ ಇಲಾಖೆಯಲ್ಲಿ ಅನುಮೋದನೆ ನೀಡಲಾಗಿದೆ. ಟೆಂಡರ್ ಓಪನ್ ಆದಮೇಲೆ ಮಾರುಕಟ್ಟೆ ದರದ ಹೆಸರಿನಲ್ಲಿ ದರ ಪರಿಷ್ಕರಣೆ ಮಾಡಿ ಅಡ್ಜಸ್ಟ್ಮೆಂಟ್ ಕಳ್ಳಾಟ ನಡೆಸಲಾಗಿದ್ದು, ಈ ಹಿಂದೆ ಸೇತುವೆ ಟೆಂಡರ್ನಲ್ಲೂ ಲೂಟಿ ಹೊಡೆದಿದ್ದ ಅದೇ ಆಸಾಮಿ ಈಗ ಕಸದಲ್ಲೂ ದೋಚಲು ಮುಂದಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಒಟ್ಟು 21 ಕಸದ ಟೆಂಡರ್ ಪ್ಯಾಕೇಜ್ಗಳಲ್ಲಿ ನಿಯಮ ಉಲ್ಲಂಘನೆಯಾಗಿದ್ದು, ಆನ್ಲೈನ್ ಟೆಂಡರ್ ನಿಯಮ ಪಾಲನೆಯಾಗದೆ ಪಾರದರ್ಶಕತೆಯ ಬಗ್ಗೆ ಭಾರಿ ಅನುಮಾನ ವ್ಯಕ್ತವಾಗಿದೆ. ಶೇ.5ಕ್ಕಿಂತ ಹೆಚ್ಚಿಗೆ ಪ್ರೀಮಿಯಂ ಕೊಟ್ಟರೆ ಸರ್ಕಾರದ ಬೊಕ್ಕಸ ಖಾಲಿಯಾಗುವುದು ಗ್ಯಾರಂಟಿ ಎಂದು ಹಣಕಾಸು ಇಲಾಖೆ ಆಕ್ಷೇಪ ವ್ಯಕ್ತಪಡಿಸಿತ್ತಲ್ಲದೆ, ಶೇ.5ರ ಪ್ರೀಮಿಯಂಗೆ ಒಪ್ಪದಿದ್ದರೆ ಮರು ಟೆಂಡರ್ ನಡೆಸುವಂತೆ ಸೂಚಿಸಿತ್ತು. ಆದರೆ ಆ ಎಚ್ಚರಿಕೆಯನ್ನೇ ಕಡೆಗಣಿಸಿ ಬಿಗ್ ಡೀಲಿಂಗ್ ನಡೆಸಲಾಗುತ್ತಿದ್ದು, ಈ ಹೆಚ್ಚುವರಿ ವೆಚ್ಚದ ಹೊರೆ ಅಂತಿಮವಾಗಿ ಜನರ ತೆರಿಗೆ ಹಣದ ಮೇಲೆಯೇ ಬೀಳಲಿದೆ. ಆರ್ಥಿಕ ಇಲಾಖೆ ಅಕ್ರಮದ ಕರಾಳ ಮುಖವನ್ನು ಬಯಲು ಮಾಡಿದ ಬೆನ್ನಲ್ಲೇ ಈಗ ಸರ್ಕಾರದ ಮುಂದಿನ ನಿರ್ಧಾರ ಏನು ಎಂಬ ಪ್ರಶ್ನೆ ಮೂಡಿದೆ.



















