ಮೆಕ್ಸಿಕೋ ಸಿಟಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸಮಾಧಾನಪಡಿಸುವ ಮತ್ತು ಓಲೈಸುವ ಪ್ರಯತ್ನದಲ್ಲಿ, ಮೆಕ್ಸಿಕೋ ಈಗ ಭಾರತ ಸೇರಿದಂತೆ ಹಲವು ಏಷ್ಯಾ ದೇಶಗಳ ಮೇಲೆ ಶೇ.50ರಷ್ಟು ಆಮದು ಸುಂಕವನ್ನು ವಿಧಿಸಿದೆ. ಬುಧವಾರ ಮೆಕ್ಸಿಕೋದ ಸೆನೆಟ್ ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಿದ್ದು, ಈ ನಿರ್ಧಾರ ಜನವರಿ 1, 2026ರಿಂದಲೇ ಜಾರಿಗೆ ಬರಲಿದೆ.
ಮೆಕ್ಸಿಕೋದೊಂದಿಗೆ ವ್ಯಾಪಾರ ಒಪ್ಪಂದ ಹೊಂದಿರದ ದೇಶಗಳಿಂದ ಆಮದಾಗುವ ವಾಹನಗಳು, ವಾಹನಗಳ ಬಿಡಿಭಾಗಗಳು, ಜವಳಿ, ಪ್ಲಾಸ್ಟಿಕ್ ಮತ್ತು ಉಕ್ಕಿನಂತಹ ಸರಕುಗಳ ಮೇಲೆ ಈ ಸುಂಕ ಹೇರಲಾಗುವುದು. ಇದರಿಂದ ಭಾರತ, ದಕ್ಷಿಣ ಕೊರಿಯಾ, ಚೀನಾ, ಥೈಲೆಂಡ್ ಮತ್ತು ಇಂಡೋನೇಷಿಯಾದಂತಹ ದೇಶಗಳ ರಫ್ತಿಗೆ ತೀವ್ರ ಹೊಡೆತ ಬೀಳಲಿದೆ.
ಟ್ರಂಪ್ ಅನುಕೂಲಕ್ಕಾಗಿ ನಿರ್ಧಾರ?
ಮೆಕ್ಸಿಕೋದ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅವರು ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದರೂ, ವಿಶ್ಲೇಷಕರು ಈ ನಿರ್ಧಾರದ ಹಿಂದೆ ಅಮೆರಿಕದ ಒತ್ತಡವಿದೆ ಎಂದು ಹೇಳುತ್ತಾರೆ. ಯು.ಎಸ್-ಮೆಕ್ಸಿಕೋ-ಕೆನಡಾ ವ್ಯಾಪಾರ ಒಪ್ಪಂದದ ಮುಂದಿನ ಪರಿಶೀಲನೆಗೂ ಮುನ್ನ ಟ್ರಂಪ್ ಅವರನ್ನು ಸಮಾಧಾನಪಡಿಸುವ ಪ್ರಯತ್ನವಾಗಿ ಇದನ್ನು ನೋಡಲಾಗುತ್ತಿದೆ.
ಈ ಹಿಂದೆ ಮೆಕ್ಸಿಕೋ ಚೀನಾದ ಸರಕುಗಳ ಮೇಲೆ ಸುಂಕ ಹೆಚ್ಚಿಸಿತ್ತು. ಆದರೂ, ಟ್ರಂಪ್ ಅವರು ಶೀನ್‌ಬಾಮ್ ಸರ್ಕಾರದ ಮೇಲೆ ನಿರಂತರವಾಗಿ ಟೀಕೆಗಳನ್ನು ಮಾಡುತ್ತಲೇ ಇದ್ದಾರೆ.
ಟ್ರಂಪ್‌ನ ನಿರಂತರ ಬೆದರಿಕೆಗಳು
ಕಳೆದ ಕೆಲವು ವಾರಗಳಲ್ಲಿ, ಟ್ರಂಪ್ ಅವರು ಮೆಕ್ಸಿಕೋದ ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ ಶೇ.50 ರಷ್ಟು ಸುಂಕ ವಿಧಿಸುವುದಾಗಿ ಎಚ್ಚರಿಸಿದ್ದರು. ಅಲ್ಲದೆ, ಅಮೆರಿಕಕ್ಕೆ ಫೆಂಟನಿಲ್ ಮಾದಕ ದ್ರವ್ಯದ ಪ್ರವಾಹವನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ, ಹೆಚ್ಚುವರಿ ಶೇ.25 ರಷ್ಟು ಸುಂಕ ವಿಧಿಸುವುದಾಗಿಯೂ ಘೋಷಿಸಿದ್ದರು.
ಈ ವಾರದ ಆರಂಭದಲ್ಲಿ, ಅಮೆರಿಕಾದ ರೈತರಿಗೆ ನೀರು ಸೌಲಭ್ಯ ಒದಗಿಸುವ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ, ಮೆಕ್ಸಿಕೋದ ಮೇಲೆ ಮತ್ತೊಮ್ಮೆ ಶೇ.5ರಷ್ಟು ಸುಂಕದ ಬೆದರಿಕೆ ಹಾಕಿದ್ದಾರೆ.
ಭಾರತದ ಮೇಲೆ ಪರಿಣಾಮ
ಅಮೆರಿಕ ಈಗಾಗಲೇ ಭಾರತದ ಆಮದುಗಳ ಮೇಲೆ ಶೇ.50ರಷ್ಟು ಸುಂಕವನ್ನು ವಿಧಿಸಿದ್ದು, ಈಗ ಮೆಕ್ಸಿಕೋ ಕೂಡ ಅದೇ ಹಾದಿ ಹಿಡಿದಿರುವುದು ಭಾರತೀಯ ರಫ್ತುದಾರರಿಗೆ ದೊಡ್ಡ ಸವಾಲಾಗಿದೆ. ಜಾಗತಿಕ ವ್ಯಾಪಾರ ಯುದ್ಧದ ಮಧ್ಯೆ ಹೊಸ ರಂಗವೊಂದು ತೆರೆದುಕೊಂಡಿರುವುದು ಭಾರತದ ವಾಣಿಜ್ಯ ಕ್ಷೇತ್ರದ ಕಳವಳವನ್ನು ಹೆಚ್ಚಿಸಿದೆ. ವ್ಯಾಪಾರ ತಜ್ಞರ ಪ್ರಕಾರ, ಈ ಸುಂಕ ವೃದ್ಧಿ ಭಾರತದ ವಾಹನ ಕೈಗಾರಿಕೆ, ಜವಳಿ ವಲಯ ಮತ್ತು ಉಕ್ಕು ರಫ್ತಿಗೆ ನೇರವಾಗಿ ಧಕ್ಕೆಯುಂಟುಮಾಡಲಿದೆ. ಟ್ರಂಪ್ ಆಡಳಿತದ ‘ಅಮೆರಿಕವೇ ಮೊದಲು’ ನೀತಿಯ ಪರಿಣಾಮಗಳು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೊಸ ಸವಾಲುಗಳನ್ನು ಒಡ್ಡುತ್ತಿವೆ.
ಇದನ್ನೂ ಓದಿ: ಗೋವಾ ನೈಟ್‌ಕ್ಲಬ್ ಅಗ್ನಿ ದುರಂತ | ಥೈಲ್ಯಾಂಡ್‌ನಲ್ಲಿ ಲೂಥ್ರಾ ಸಹೋದರರ ಬಂಧನ



















