ಇಸ್ಲಾಮಾಬಾದ್: ಈ ವರ್ಷದ ಮೇ ತಿಂಗಳಲ್ಲಿ ಭಾರತದೊಂದಿಗೆ ನಡೆದ ಸೇನಾ ಸಂಘರ್ಷದ ವೇಳೆ ಪಾಕಿಸ್ತಾನವನ್ನು ‘ದೈವಿಕ ಹಸ್ತಕ್ಷೇಪ’ (Divine Intervention) ಕಾಪಾಡಿತು ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಮುನೀರ್ ಅವರು ಖುರಾನ್‌ನ ವಚನಗಳನ್ನು ಉಲ್ಲೇಖಿಸಿ ಈ ಮಾತುಗಳನ್ನಾಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 10ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು, “ಅಲ್ಲಾಹನು ನಿಮಗೆ ಸಹಾಯ ಮಾಡಿದರೆ, ಯಾರೂ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ. ಆ ಕಠಿಣ ಸಮಯದಲ್ಲಿ ನಮಗೆ ಅದೃಶ್ಯ ಶಕ್ತಿಯೊಂದು ಬೆಂಬಲವಿರುವುದು ಅನುಭವಕ್ಕೆ ಬಂತು,” ಎಂದು ಅವರು ಹೇಳಿದ್ದಾರೆ.
ಮೇ ತಿಂಗಳಲ್ಲಿ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂದೂರ’ ಹೆಸರಿನಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿತ್ತು.
ಭಾರತದ ಕಾರ್ಯಾಚರಣೆಯ ವಿವರ:
ಭಾರತೀಯ ವಾಯುಪಡೆಯು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹಾವಲ್ಪುರ್ ಮತ್ತು ಮುರಿದ್ಕೆಯಲ್ಲಿರುವ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿತ್ತು. ಪಾಕ್ ಆಕ್ರಮಿತ ಕಾಶ್ಮೀರದ ಮುಜಫರಾಬಾದ್ ಮತ್ತು ಕೋಟ್ಲಿಗಳಲ್ಲಿರುವ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲಾಗಿತ್ತು. ಭಾರತದ ಅಧಿಕಾರಿಗಳ ಪ್ರಕಾರ, ಈ ದಾಳಿಯಲ್ಲಿ ಪಾಕಿಸ್ತಾನದ ವಾಯುನೆಲೆಗಳ ರನ್‌ವೇಗಳಿಗೆ ಹಾನಿಯಾಗಿತ್ತು ಮತ್ತು ವಾಯು ರಕ್ಷಣಾ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಕೇವಲ ಅರ್ಧ ಗಂಟೆಯೊಳಗೆ ನಡೆದ ಈ ಕಾರ್ಯಾಚರಣೆಯು ಉಗ್ರರ ಮೂಲಸೌಕರ್ಯಗಳನ್ನು ನಾಶಪಡಿಸುವಲ್ಲಿ ಯಶಸ್ವಿಯಾಗಿತ್ತು.
ಭಾರತವು ‘ಆಪರೇಷನ್ ಸಿಂದೂರ’ವನ್ನು ಭಯೋತ್ಪಾದನೆ ವಿರುದ್ಧದ ನಿರಂತರ ಕಾರ್ಯಾಚರಣೆ ಎಂದು ಕರೆದಿದ್ದು, ದಕ್ಷಿಣ ಏಷ್ಯಾ ಪ್ರದೇಶದ ಶಾಂತಿ ಮತ್ತು ಸ್ಥಿರತೆಗೆ ಧಕ್ಕೆ ತರುವ ಶಕ್ತಿಗಳ ವಿರುದ್ಧ ಇದನ್ನು ಬಳಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಪಾಕ್ ಸೇನಾ ಮುಖ್ಯಸ್ಥರ ‘ದೈವಿಕ ಶಕ್ತಿ’ಯ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ದೆಹಲಿ ಪ್ರತಿಭಟನೆ ವಿವಾದ : ಭಾರತದ ಸ್ಪಷ್ಟನೆ ಬೆನ್ನಲ್ಲೇ ಬಾಂಗ್ಲಾ ಉದ್ಧಟತನ, ರಾಜತಾಂತ್ರಿಕ ಕಾರ್ಯಾಚರಣೆ ಕಡಿತತ ಎಚ್ಚರಿಕೆ



















