ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಇನ್ನು ಕೇವಲ 8 ದಿನಗಳು ಬಾಕಿ ಇರುವಂತೆಯೇ ಎಲ್ಲ ರಾಜಕೀಯ ಪಕ್ಷಗಳೂ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದರೆ, ಈ ಬಾರಿಯ ಚುನಾವಣೆಯ ಪ್ರಮುಖ ಆಕರ್ಷಣೆಯಾಗಿರುವ ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಸ್ಥಾಪಕ ವಿಜಯ್ ಅವರು ಸತತವಾಗಿ ತಮ್ಮ ಪ್ರಚಾರ ಸಭೆಗಳನ್ನು ರದ್ದುಗೊಳಿಸುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಮಾರ್ಚ್ 15 ರಂದು ಚುನಾವಣಾ ದಿನಾಂಕ ಘೋಷಣೆಯಾದಾಗಿನಿಂದ ವಿಜಯ್ ಅವರು ಚುನಾವಣಾ ಆಯೋಗದಿಂದ ಅನುಮತಿ ಪಡೆದಿದ್ದರೂ ಸಹ ಹಲವು ಕಾರ್ಯಕ್ರಮಗಳನ್ನು ದಿಢೀರ್ ರದ್ದುಗೊಳಿಸಿದ್ದಾರೆ. ಕಳೆದ ತಿಂಗಳು ನಾಮಪತ್ರ ಸಲ್ಲಿಸಿದ ನಂತರ ಪೆರಂಬೂರ್ ಮತ್ತು ಕೊಳತ್ತೂರಿನಲ್ಲಿ ಅಬ್ಬರದ ಪ್ರಚಾರ ನಡೆಸಿದ್ದ ವಿಜಯ್, ನಂತರ ವಿಲ್ಲಿವಾಕ್ಕಂ, ಟಿ. ನಗರ ಮತ್ತು ಕಡಲೂರು ಪ್ರಚಾರ ಸಭೆಗಳಿಂದ ಹಿಂದೆ ಸರಿದಿದ್ದಾರೆ. ಪೊಲೀಸ್ ಭದ್ರತೆಯ ವೈಫಲ್ಯ ಮತ್ತು ಸಮಯದ ಅಭಾವವನ್ನು ಪಕ್ಷವು ಕಾರಣವಾಗಿ ನೀಡುತ್ತಿದ್ದರೂ, ಸತತವಾಗಿ ಸಭೆಗಳು ರದ್ದಾಗುತ್ತಿರುವುದು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ.

‘ವರ್ಕ್ ಫ್ರಮ್ ಹೋಮ್’ ಎಂದ ಡಿಎಂಕೆ
ವಿಜಯ್ ಅವರ ಈ ನಡೆಯನ್ನು ಆಡಳಿತಾರೂಢ ಡಿಎಂಕೆ ಕಟುವಾಗಿ ಟೀಕಿಸಿ ವ್ಯಂಗ್ಯವಾಡಿದೆ. ವಿಜಯ್ ಅವರು “ವರ್ಕ್ ಫ್ರಮ್ ಹೋಮ್” (ಮನೆಯಿಂದಲೇ ಕೆಲಸ) ಮಾದರಿಯಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಡಿಎಂಕೆ ವ್ಯಂಗ್ಯವಾಡಿದೆ. ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು, “ಕೆಲವು ನಾಯಕರು ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಹಗಲಿರುಳು ಶ್ರಮಿಸುತ್ತಿದ್ದರೆ, ಮತ್ತೆ ಕೆಲವರು ಬಿಡುವಿನ ನಡುವೆ ಪ್ರಚಾರ ಮಾಡುತ್ತಿದ್ದಾರೆ” ಎಂದು ಕುಟುಕಿದ್ದಾರೆ.
ಕರೂರ್ ದುರಂತದ ನೆರಳು ಕಾರಣವೇ?
ಮೂಲಗಳ ಪ್ರಕಾರ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕರೂರ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸಂಭವಿಸಿದ ಕಾಲ್ತುಳಿತದ ದುರಂತವು ವಿಜಯ್ ಅವರನ್ನು ಹೆಚ್ಚು ಜಾಗರೂಕರನ್ನಾಗಿ ಮಾಡಿದೆ. ಆ ಘಟನೆಯಲ್ಲಿ 41 ಮಂದಿ ಮೃತಪಟ್ಟಿದ್ದರು, ಇದು ಪಕ್ಷದ ಮೇಲೆ ಗಂಭೀರ ಆರೋಪಗಳಿಗೆ ಕಾರಣವಾಗಿತ್ತು. ಹೀಗಾಗಿ, ಸಾರ್ವಜನಿಕ ಸುರಕ್ಷತೆ ಮತ್ತು ಜನಸಂದಣಿಯ ನಿರ್ವಹಣೆಯ ಬಗ್ಗೆ ವಿಜಯ್ ಅತೀವ ಎಚ್ಚರಿಕೆ ವಹಿಸುತ್ತಿದ್ದಾರೆ ಎನ್ನಲಾಗಿದೆ.
ತಮ್ಮ ನಾಯಕನ ಅನುಪಸ್ಥಿತಿಯಲ್ಲಿ ಟಿವಿಕೆ ಅಭ್ಯರ್ಥಿಗಳು ಹೊಸ ಹಾದಿ ತುಳಿದಿದ್ದಾರೆ. ತಿರುವೇರುಂಬೂರ್ ಅಭ್ಯರ್ಥಿಯು ವಿಜಯ್ ಅವರ ಕಟೌಟ್ ಬಳಸಿ ಪ್ರಚಾರ ಮಾಡುತ್ತಿದ್ದರೆ, ಕೊಳತ್ತೂರು ಅಭ್ಯರ್ಥಿಯು ವಿಜಯ್ ಅವರಂತೆಯೇ ಕಾಣುವ ‘ಡ್ಯೂಪ್’ ಕಲಾವಿದನನ್ನು ಬಳಸಿ ಮತಯಾಚಿಸುತ್ತಿದ್ದಾರೆ. ಸ್ಟಾಲಿನ್, ಪಳನಿಸ್ವಾಮಿ ಮತ್ತು ಸೀಮನ್ ಅವರಂತಹ ಹಿರಿಯ ನಾಯಕರು ರಾಜ್ಯಾದ್ಯಂತ ಮಿಂಚಿನ ಸಂಚಾರ ನಡೆಸುತ್ತಿರುವಾಗ, ವಿಜಯ್ ಅವರ ಈ ಹೆಜ್ಜೆ ಮತದಾರರ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಸಾವಿರಾರು ಭಾವಗಳಿಗೆ ಜೀವ ತುಂಬಿದ್ದ ಅದ್ಭುತ ಚೇತನ ಆಶಾ ಭೋಂಸ್ಲೆ!



















