ಬೆಂಗಳೂರು: ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಗಳ ಅಪಘಾತ ಹೆಚ್ಚಾಗುತ್ತಿದ್ದು, ಅವುಗಳಿಂದಲೂ ನಿಗಮಕ್ಕೆ ಹೆಚ್ಚಿನ ನಷ್ಟ ಉಂಟಾಗುತ್ತಿದೆ ಎನ್ನಲಾಗುತ್ತಿದೆ.
ಅಪಘಾತಗಳನ್ನು ತಪ್ಪಿಸಲು ಮತ್ತು ಸುರಕ್ಷಿತ ಚಾಲನೆಗಾಗಿ ಸಂಸ್ಥೆಯ ಚಾಲಕರಿಗೆ ವಿಶೇಷ ತರಬೇತಿ ಕೊಡಿಸಲು ಕೆಎಸ್ಆರ್ಟಿಸಿ ಮುಂದಾಗಿದೆ. ಹಿಂದೂಸ್ಥಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂನಿಂದ ಸ್ಪೆಷಲ್ ಟ್ರೈನಿಂಗ್ ಕೊಡಿಸಲು ಸಾರಿಗೆ ನಿಗಮ ಮುಂದಾಗಿದೆ ಎನ್ನಲಾಗಿದೆ.
ಕೆಎಸ್ಆರ್ಟಿಸಿಯಲ್ಲಿ 8 ಸಾವಿರಕ್ಕೂ ಹೆಚ್ಚು ಬಸ್ಸುಗಳಿವೆ. ಪ್ರತಿದಿನ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಲೇ ಇರುತ್ತವೆ. ಹೀಗಾಗಿ ಹಲವಾರು ಜನರು ಪ್ರಾಣ ಕಳೆದುಕೊಳ್ಳುತ್ತಲೇ ಇದ್ದಾರೆ. ಹೀಗಾಗಿ ಪರಿಹಾರದ ರೂಪದಲ್ಲಿ ಪ್ರತಿವರ್ಷ ಬರೋಬ್ಬರಿ ನೂರು ಕೋಟಿ ರೂ. ಹಣ ಖರ್ಚಾಗುತ್ತಿದೆ. ಹೀಗಾಗಿ ಈಗ ಇದನ್ನು ತಪ್ಪಿಸಲು ಇಲಾಖೆ ಮುಂದಾಗಿದೆ.
ಸಾರಿಗೆ ಬಸ್ ಗಳ ಅಪಘಾತಗಳಿಂದ 2021-2022ರಲ್ಲಿ 494 ಅಪಘಾತಗಳು ಸಂಭವಿಸಿದ್ದು, 153 ಜನರು ಪ್ರಾಣ ಕಳೆದುಕೊಂಡಿದ್ದಾರೆ.2022-23 ರಲ್ಲಿ 770 ಅಪಘಾತಗಳಾಗಿದ್ದರೆ, ಅದರಲ್ಲಿ 231 ಜನ ಪ್ರಾಣ ಕಳೆದುಕೊಂಡಿದ್ದಾರೆ. 2023-24 ರಲ್ಲಿ 220 ಅಪಘಾತಗಳಾಗಿದ್ದರೆ, ಇದರಲ್ಲಿ 70 ಜನರು ಪ್ರಾಣ ಕಳೆದು ಕೊಂಡಿದ್ದಾರೆ. ಹೀಗಾಗಿ ಸಾರಿಗೆ ನಿಗಮಕ್ಕೆ ಹೆಚ್ಚು ನಷ್ಟ ಉಂಟಾಗುತ್ತಿದೆ. ಹಿಂದೂಸ್ಥಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂ ರೀತಿಯಲ್ಲಿ ಕೆಲಸ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಹೆಚ್ಪಿಸಿಎಲ್ ಮತ್ತು ಬಿಪಿಸಿಯಲ್ಲಿ 24 ಸಾವಿರ ಟ್ರಕ್ಗಳಿವೆ. ಆದರೆ ಅಪಘಾತಗಳ ಸಂಖ್ಯೆ ತೀರಾ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಚಾಲಕರಿಗೆ ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂನ ತಜ್ಞರಿಂದ ವಿಶೇಷ ತರಬೇತಿ ನೀಡಲು ಸಿದ್ಧತೆ ನಡೆದಿದೆ.