ಮುಂಬೈ : 2025ರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ‘ಸರಣಿ ಶ್ರೇಷ್ಠ’ ಪ್ರಶಸ್ತಿ ಪಡೆದ ಭಾರತದ ಯುವ ಬ್ಯಾಟರ್ ಅಭಿಷೇಕ್ ಶರ್ಮಾ, ಬಹುಮಾನವಾಗಿ ಪಡೆದ ಹೊಚ್ಚ ಹೊಸ HAVAL H9 SUV ಕಾರನ್ನು ಭಾರತದಲ್ಲಿ ಓಡಿಸಲು ಸಾಧ್ಯವಾಗದ ವಿಚಿತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಏಷ್ಯಾ ಕಪ್‌ನಲ್ಲಿ 7 ಪಂದ್ಯಗಳಿಂದ 3 ಅರ್ಧಶತಕಗಳ ಸಹಿತ 314 ರನ್ ಗಳಿಸಿ ಟೂರ್ನಿಯ ಗರಿಷ್ಠ ಸ್ಕೋರರ್ ಆಗಿದ್ದ ಅಭಿಷೇಕ್, ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈ ಅಮೋಘ ಪ್ರದರ್ಶನಕ್ಕಾಗಿ ಅವರಿಗೆ ದುಬಾರಿ ಬೆಲೆಯ HAVAL H9 SUV ಕಾರನ್ನು ಬಹುಮಾನವಾಗಿ ನೀಡಲಾಗಿತ್ತು. ಆದರೆ, ಭಾರತದ ರಸ್ತೆ ಸಾರಿಗೆ ಕಾನೂನುಗಳ ಕಾರಣದಿಂದಾಗಿ ಅವರು ಈ ಕಾರನ್ನು ತಾಯ್ನಾಡಿನಲ್ಲಿ ಬಳಸುವಂತಿಲ್ಲ. ಬಹುಮಾನವಾಗಿ ನೀಡಲಾದ HAVAL H9 ಕಾರು ಎಡಗೈ ಡ್ರೈವ್ (Left-Hand Drive) ವಾಹನವಾಗಿದೆ.
ಭಾರತದಲ್ಲಿ ರಸ್ತೆ ನಿಯಮಗಳ ಪ್ರಕಾರ, ಕೇವಲ ಬಲಗೈ ಡ್ರೈವ್ (Right-Hand Drive) ವಾಹನಗಳಿಗೆ ಮಾತ್ರ ನೋಂದಣಿ ಮತ್ತು ಚಾಲನೆಗೆ ಅನುಮತಿ ಇದೆ. ಭಾರತದ ಪ್ರಾದೇಶಿಕ ಸಾರಿಗೆ ಕಚೇರಿ (RTO) ನಿಯಮಗಳ ಪ್ರಕಾರ ಎಡಗೈ ಡ್ರೈವ್ ವಾಹನಗಳನ್ನು ರಸ್ತೆಗೆ ಇಳಿಸುವುದು ಕಾನೂನುಬಾಹಿರವಾಗಿರುವುದರಿಂದ, ಅಭಿಷೇಕ್ ಶರ್ಮಾ ತಮಗೆ ಸಿಕ್ಕ ಈ ಐಷಾರಾಮಿ ಕಾರನ್ನು ಭಾರತದಲ್ಲಿ ನೋಂದಾಯಿಸಲು ಅಥವಾ ಓಡಿಸಲು ಸಾಧ್ಯವಾಗುತ್ತಿಲ್ಲ.
ಸದ್ಯ ಅಭಿಷೇಕ್ ಶರ್ಮಾ ಅವರ ಮುಂದೆ ಎರಡು ಪ್ರಮುಖ ಆಯ್ಕೆಗಳಿವೆ. ಒಂದು, ಕಾರಿನ ಮೌಲ್ಯಕ್ಕೆ ಸಮನಾದ ಹಣವನ್ನು ಬಹುಮಾನವಾಗಿ ಸ್ವೀಕರಿಸಬಹುದು. ಇಲ್ಲವಾದಲ್ಲಿ, HAVAL ಕಂಪನಿಯು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಿದೆ ಎನ್ನಲಾದ H9 ಮಾದರಿಯ ಬಲಗೈ ಡ್ರೈವ್ ಆವೃತ್ತಿಗಾಗಿ ಕಾಯಬೇಕಾಗುತ್ತದೆ.
2018ರ ಅಂಡರ್-19 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಅಭಿಷೇಕ್ ಶರ್ಮಾ, ಸುಮಾರು ಆರು ವರ್ಷಗಳ ಕಠಿಣ ಪರಿಶ್ರಮದ ನಂತರ ಭಾರತೀಯ ಹಿರಿಯರ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಅವರ ಸಮಕಾಲೀನರಾದ ಪೃಥ್ವಿ ಶಾ, ಶುಭಮನ್ ಗಿಲ್ ಅವರಿಗಿಂತ ತಡವಾಗಿ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆದರೂ, ತಮ್ಮ ಮೊದಲ ಪ್ರಮುಖ ಟೂರ್ನಿಯಲ್ಲೇ ಅಬ್ಬರಿಸಿ ಭರವಸೆ ಮೂಡಿಸಿದ್ದಾರೆ.