ಮುಂಬೈ: ಕಾಲೇಜಿನ ಬೀಳ್ಕೊಡುಗೆ (ಫೇರ್‌ವೆಲ್) ಸಮಾರಂಭದಲ್ಲಿ ನಗು ನಗುತ್ತಾ ಭಾಷಣ ಮಾಡುತ್ತಿದ್ದ 20 ವರ್ಷದ ಬಿಎಸ್‌ಸಿ ಅಂತಿಮ ವರ್ಷದ ವಿದ್ಯಾರ್ಥಿನಿಯೊಬ್ಬಳು ಏಕಾಏಕಿ ಕುಸಿದುಬಿದ್ದು ಮೃತಪಟ್ಟ ಮನಕಲಕುವ ಘಟನೆ ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯ ಪರಂಡ ತಾಲೂಕಿನ ಆರ್.ಜಿ. ಶಿಂದೆ ಕಾಲೇಜಿನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರಿಗೂ ಆಘಾತ ಉಂಟುಮಾಡಿದೆ.
ವರ್ಷಾ ಖರಾಟ್ ತನ್ನ ಕಾಲೇಜಿನ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಷಣ ಮಾಡುತ್ತಿದ್ದಳು. ವೀಡಿಯೊದಲ್ಲಿ ಆಕೆ ಉತ್ಸಾಹದಿಂದ ಭಾಷಣ ಆರಂಭಿಸಿ, ಸಹಪಾಠಿಗಳನ್ನು ಹಾಸ್ಯದಿಂದ ಕೂಡಿದ ಮಾತುಗಳಿಂದ ರಂಜಿಸುತ್ತಿರುವುದು ಕಂಡುಬರುತ್ತದೆ. ಆಕೆಯ ಮಾತುಗಳಿಗೆ ವೇದಿಕೆಯಲ್ಲಿದ್ದ ಗಣ್ಯರೂ ನಗುತ್ತಾ ಸಂತೋಷಪಡುತ್ತಿರುವ ದೃಶ್ಯವಿದೆ. ಆದರೆ, ಕೆಲವೇ ಕ್ಷಣಗಳಲ್ಲಿ ಭಾಷಣದ ಮಧ್ಯೆಯೇ ಆಕೆ ಏಕಾಏಕಿ ತನ್ನ ತಲೆಯನ್ನು ಹಿಡಿದುಕೊಂಡು ಸ್ಟೇಜ್ ಮೇಲೆ ಕುಸಿದು ಬೀಳುತ್ತಾಳೆ. ಈ ದೃಶ್ಯವನ್ನು ಕಂಡೊಡಗೆ ಆಕೆಯತ್ತ ಧಾವಿಸುವ ಸಹಪಾಠಿಗಳು ಮತ್ತು ಶಿಕ್ಷಕರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದರೂ ಆಕೆ ಅಷ್ಟರಲ್ಲೇ ಕೊನೆಯುಸಿರೆಳೆದಿದ್ದಳು ಎಂದು ವೈದ್ಯರು ಹೇಳಿದ್ದಾರೆ.
ವರ್ಷಾ ಖರಾಟ್‌ಗೆ ಹಿಂದಿನಿಂದಲೂ ಹೃದಯ ಸಂಬಂಧಿ ಸಮಸ್ಯೆಗಳಿದ್ದವು. ಸುಮಾರು ಏಳು ವರ್ಷಗಳ ಹಿಂದೆ ಆಕೆಗೆ ಬೈಪಾಸ್ ಶಸ್ತ್ರಚಿಕಿತ್ಸೆಯೂ ಆಗಿತ್ತು ಎಂದು ಆಕೆಯ ಚಿಕ್ಕಪ್ಪ ಧನಾಜಿ ಖರಾಟ್ ತಿಳಿಸಿದ್ದಾರೆ. ಆಕೆ ಶಸ್ತ್ರಚಿಕಿತ್ಸೆಯ ನಂತರ ನಿಯಮಿತವಾಗಿ ಔಷಧಿಗಳನ್ನು ಸೇವಿಸುತ್ತಿದ್ದಳು. ಆದರೆ, ಘಟನೆಯ ದಿನ ಆಕೆ ಕಾಲೇಜಿಗೆ ತೆರಳುವ ಆತುರದಲ್ಲಿ ಔಷಧಿಗಳನ್ನು ಸೇವಿಸಲು ಮರೆತಿದ್ದಳು ಎಂದು ಧನಾಜಿ ಹೇಳಿದ್ದಾರೆ. ಈ ಔಷಧದ ಕೊರತೆಯೇ ಆಕೆಯ ಆಕಸ್ಮಿಕ ಸಾವಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ವರ್ಷಾ ಖರಾಟ್‌ರ ಸಾವು ಆಕೆಯ ಕುಟುಂಬಕ್ಕೆ ಮತ್ತು ಸಹಪಾಠಿಗಳಿಗೆ ಭಾರೀ ಆಘಾತವನ್ನು ಉಂಟುಮಾಡಿದೆ. ಆಕೆಯ ಚಿಕ್ಕಪ್ಪ ಧನಾಜಿ ಖರಾಟ್, ಜಿಲ್ಲಾ ಪರಿಷತ್ ಶಾಲೆಯ ಶಿಕ್ಷಕರಾಗಿದ್ದು, “ವರ್ಷಾ ತುಂಬಾ ಪ್ರತಿಭಾವಂತ ಮತ್ತು ಉತ್ಸಾಹಿ ವಿದ್ಯಾರ್ಥಿನಿಯಾಗಿದ್ದಳು. ಆಕೆಯ ಅಕಾಲಿಕ ಸಾವು ನಂಬಲಾಗದಂಥದ್ದು” ಎಂದು ಭಾವುಕರಾಗಿ ಹೇಳಿದ್ದಾರೆ.
ಕಾಲೇಜಿನ ಶಿಕ್ಷಕರು ಮತ್ತು ಸಹಪಾಠಿಗಳು ಸಹ ಈ ಘಟನೆಯಿಂದ ದಿಗ್ಭ್ರಮೆಗೊಂಡಿದ್ದಾರೆ. ಸಮಾರಂಭದ ಸಂತೋಷದ ವಾತಾವರಣವು ಕ್ಷಣಾರ್ಧದಲ್ಲಿ ಶೋಕಕ್ಕೆ ತಿರುಗಿದ್ದು, ಇಡೀ ಕಾಲೇಜು ಸ್ತಬ್ಧವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ವೀಡಿಯೊ ವೈರಲ್ ಆಗಿದ್ದು, ಜನರು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಅನೇಕರು ಯುವ ಜನರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವನ್ನು ಒತ್ತಿಹೇಳಿದ್ದಾರೆ.