ಹುಬ್ಬಳ್ಳಿ: ಪಾಪಿ ಮಗನೊಬ್ಬ ಆಸ್ತಿಗಾಗಿ ತಂದೆಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾಗರಾಜ(77) ಪಾಪಿ ಮಗನಿಂದ ಹತ್ಯೆಯಾದ ವ್ಯಕ್ತಿ. ಅಣ್ಣಪ್ಪ ಕೊಲೆ ಮಾಡಿರುವ ಆರೋಪಿ. ಮನೆಯಲ್ಲಿ ಆಸ್ತಿಗಾಗಿ ಜಗಳ ನಡೆದಿದ್ದು, ಅದು ವಿಕೋಪಕ್ಕೆ ತೆರಳಿದೆ. ಆಗ ಮಗ ಚಾಕುವಿನಿಂದ ತಂದೆಯ ಮೇಲೆ ಹಲ್ಲೆ ಮಾಡಿದ್ದಾನೆ. ಸದ್ಯ ಪಾಪಿ ಮಗನ ವಿರುದ್ಧ ತಾಯಿ ದೂರು ನೀಡಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಂದೆ ನಾಗರಾಜ ಅವರನ್ನು ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ನಾಲ್ಕೈದು ದಿನಗಳಿಂದ ಜೀವನ್ಮರಣದ ನಡುವೆ ಹೋರಾಟ ನಡೆಸಿದ ನಾಗರಾಜ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಂದೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹೆಂಡತಿಯನ್ನು ಕರೆದುಕೊಂಡು ಆರೋಪಿ ಅಣ್ಣಪ್ಪ ಪರಾರಿಯಾಗಿದ್ದಾನೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.