ಚಿಕ್ಕಬಳ್ಳಾಪುರ : ಮೊಮ್ಮಗಳು ಬೇರೆ ಧರ್ಮದ ಯುವಕನ ಜೊತೆಗೆ ಮದುವೆಯಾಗಿದ್ದಕ್ಕೆ, ಅಜ್ಜಿ ಆಕೆಯ 40 ದಿನದ ನವಜಾತ ಶಿಶುವನ್ನು ಕೊಲೆ ಮಾಡಿರುವ ಘೋರ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ಪಟ್ಟಣದಲ್ಲಿ 2025ರ ಡಿಸೆಂಬರ್ 24ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಳೆದ 2025 ಡಿಸೆಂಬರ್ 24ರಂದು ಚೇಳೂರು ಪಟ್ಟಣದಲ್ಲಿ ಮೆಹಮೂಬಿ ಎಂಬಾಕೆಯ ಮನೆಯಲ್ಲಿ ಈಕೆಯ ಮೊಮ್ಮಗಳ 40 ದಿನದ ಗಂಡು ಮಗು ಸಾವನ್ನಪ್ಪಿತ್ತು. ಅನಾರೋಗ್ಯ ಉಸಿರಾಟದ ಸಮಸ್ಯೆಯಿಂದ ಮಗು ಮೃತಪಟ್ಟಿದೆ ಎಂದು ಅಜ್ಜಿ ಮಣ್ಣು ಸಹ ಮಾಡಿಸಿಬಿಟ್ಟಿದ್ದಳು.
ಆದರೆ ಅಜ್ಜಿಯ ಮೇಲೆ ಅನುಮಾನಗೊಂಡ ಮೊಮ್ಮಗಳು, ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ದೂರಿನ ಮೇರೆಗೆ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಎಫ್ಎಸ್ಎಲ್ ವರದಿಗೆ ಕಳುಹಿಸಲಾಗಿತ್ತು. ಎಫ್ಎಸ್ಎಲ್ ವರದಿಯಲ್ಲಿ ಮಗು ಉಸಿರುಗಟ್ಟಿಸಿ ಕೊಂದಿರುವುದಾಗಿ ಬೆಳಕಿಗೆ ಬಂದಿದೆ. ಹೀಗಾಗಿ ಮಗುವಿನ ಅಜ್ಜಿಯೇ ಕೊಲೆ ಮಾಡಿರುವುದು ಬಯಲಾಗಿದೆ.
ಕೇವಲ 40 ದಿನದ ಹಸುಗೂಸನ್ನು ಹತ್ಯೆಗೈದಿದ್ದ ಅಜ್ಜಿಯನ್ನು ಚೇಳೂರು ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಅಜ್ಜಿಗೆ ಅನ್ಯಧರ್ಮದ ಯುವಕನೊಂದಿಗೆ ಪ್ರೇಮ ವಿವಾಹವಾಗಿರುವುದು ಇಷ್ಟವಿರಲಿಲ್ಲ. ಹಾಗೂ ಮಗುವನ್ನ ನೋಡಿಕೊಳ್ಳಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಶ್ರೀಮಂತರನ್ನೇ ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಖತರ್ನಾಕ್ ಲೇಡಿ ಅರೆಸ್ಟ್.. ಸಹಚರ ಪರಾರಿ!



















