ನವದೆಹಲಿ: ಪತ್ನಿಯ ಸಾವಿನ ಸುದ್ದಿ ಕೇಳಿ ಹಿರಿಯ ಐಪಿಎಸ್ ಅದಿಕಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಅಸ್ಸಾಂ (Assam) ಸರ್ಕಾರದಲ್ಲಿ ಗೃಹ ಮತ್ತು ರಾಜಕೀಯ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಪೊಲೀಸ್ ಸೇವೆಯ (IPS) ಹಿರಿಯ ಅಧಿಕಾರಿ ಶಿಲಾದಿತ್ಯ ಚೇಟಿಯಾ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಎನ್ನಲಾಗಿದೆ.
ಶಿಲಾದಿತ್ಯ ಅವರ ಪತ್ನಿ ಕ್ಯಾನ್ಸರ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಸಾವನ್ನಪ್ಪಿದ ಕೆಲವೇ ನಿಮಿಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಧಿಕಾರಿಯ ದುರಂತ ಸಾವಿನಿಂದ ಇಡೀ ಅಸ್ಸಾಂ ಪೊಲೀಸ್ ಕುಟುಂಬ ತೀವ್ರ ದುಃಖದಲ್ಲಿದೆ ಎಂದು ಡಿಜಿಪಿ ಜಿಪಿ ಸಿಂಗ್ ಹೇಳಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ಚೇಟಿಯಾ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಿ ಅವರು ಸಾವನ್ನಪ್ಪಿದ್ದರು ಎನ್ನಲಾಗಿದೆ.
ಅಸ್ಸಾಂ ಸರ್ಕಾರದಲ್ಲಿ ಕಾರ್ಯದರ್ಶಿಯಾಗುವ ಮೊದಲು ಹಲವೆಡೆ ಅವರು ಕಾರ್ಯ ನಿರ್ವಹಿಸಿದ್ದರು. ಈ ಕುರಿತು ಇಲಾಖೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.