ಸಮಾಜದಲ್ಲಿ ದುಡಿಮೆಗಿಂತ ಶೋಕಿಗೆ ಹೆಚ್ಚು ಬೆಲೆ ನೀಡುವ ಮಕ್ಕಳಿದ್ದಾರೆ. ಅದರಲ್ಲೂ ಫೋನ್ ಶೋಕಿಯಂತೂ ಹೆಚ್ಚಾಗಿ ಬಿಟ್ಟಿದೆ. ಹಲವು ತಂದೆ-ತಾಯಿಗಳು ಮಕ್ಕಳ ಬೇಡಿಕೆ ಈಡೇರಿಸುವುದಕ್ಕಾಗಿ ಏನೆಲ್ಲ ಮಾಡಲು ಸಿದ್ಧರಿರುತ್ತಾರೆ. ತಮಗೆ ಎಷ್ಟೇ ಕಷ್ಟವಾದರೂ ಸರಿ ಮಕ್ಕಳ ಆಸೆ ಪೂರೈಸುತ್ತಿರುತ್ತಾರೆ. ಆದರೆ, ಮಕ್ಕಳಿಗೆ ಮಾತ್ರ ತಂದೆ-ತಾಯಿಗಳ ತ್ಯಾಗ ಅರ್ಥವಾಗುತ್ತಿರುವುದಿಲ್ಲ ಅನಿಸುತ್ತಿರುತ್ತದೆ. ಹಲವು ಪೋಷಕರು ಪಡುತ್ತಿರುವ ಕಷ್ಟದ ಮಧ್ಯೆಯೇ ಮಕ್ಕಳ ಆಸೆಗಾಗಿ ಹೆಣಗಾಡುವುದನ್ನು ಕಂಡರೆ ನಿಜವಾಗಿಯೂ ಕಣ್ಣಲ್ಲಿ ನೀರು ಬರುತ್ತದೆ. ಇಲ್ಲೊಂದು ಘಟನೆ ಇದಕ್ಕೆ ಈಗ ಸಾಕ್ಷಿಯಾಗಿ ನಿಂತಿದೆ.
ಹುಡುಗನೊಬ್ಬ ತನಗೆ ದುಬಾರಿ ಐಫೋನ್ ಬೇಕೇ ಬೇಕೆಂದು ದೇವಾಲಯದ ಮುಂದೆ ಹೂವು ಮಾರಿ ಜೀವನ ಸಾಗಿಸುತ್ತಿದ್ದ ತಾಯಿಯ ಮುಂದೆ ಹಠ ಹಿಡಿದಿದ್ದಾನೆ. ಹೂವು ಮಾರಿ ಬಂದ ದುಡ್ಡು ಹೊಟ್ಟೆ-ಬಟ್ಟೆಗೆ ಮಾತ್ರ ಸಾಲುತ್ತದೆ ಅಂದರೂ ಆತನ ಹಠ ಮುಂದುವರೆದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಊಟ ಮಾಡುವುದನ್ನೇ ನಿಲ್ಲಿಸಿದ್ದಾನೆ. ಮಗನ ಈ ಹಠ ಕಂಡು ಬೇಸರಗೊಂಡ ತಾಯಿ ಅದೇಗೊ ಹಣ ಹೊಂದಿಸಿ, ಆತನಿಗೆ ಐಫೋನ್ ತೆಗೆದುಕೊಳ್ಳುವುದಕ್ಕೆ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಜನರು ತಾಯಿಗೆ ಆಸರೆಯಾಗುವುದನ್ನು ಬಿಟ್ಟು ಈ ರೀತಿ ಕಷ್ಟ ನೀಡಿದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.
ತಾಯಿ ಮಗನಿಗೆ ಹಣ ನೀಡಿ ಅವನೊಂದಿಗೆ ಮೊಬೈಲ್ ಅಂಗಡಿಗೆ ಕರೆದೊಯ್ದಿರುವ ವಿಡಿಯೋ ವೈರಲ್ ಆಗಿದೆ. ಅವಳು ತನ್ನ ಮಗನಿಗಾಗಿ ಹಣ ನೀಡಿದ್ದಾರೆ. ಮನದಲ್ಲಿ ನೋವಿದ್ದರೂ ಮಗನಿಗಾಗಿ ಸಂತೋಷದಿಂದ ಇರುವಂತೆ ವರ್ತಿಸಿದ್ದಾರೆ. ಏಕೆಂದರೆ, ಐಫೋನ್ ಬೆಲೆ ಲಕ್ಷದ ಮೇಲೆ ಇರುತ್ತದೆ. ಅದು ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಸಿಗುವಂತದಲ್ಲ. ಆದರೆ, ಈ ಹುಡುಗ ಅದೇ ಫೋನ್ ಬೇಕೆಂದು ಹಠ ಹಿಡಿದಿದ್ದಕ್ಕೆ, ಆತನ ಆಸೆ ಪೂರೈಸಲು ತಾಯಿ ಅಷ್ಟೊಂದು ದುಡ್ಡು ಹೊಂದಿಸಿ ಕೊಟ್ಟಿದ್ದಾರೆ. ಆದರೆ, ಅಷ್ಟೊಂದು ದುಡ್ಡು ಸಂಪಾದಿಸಲು ಪಟ್ಟ ಕಷ್ಟ ಎಷ್ಟು ಎಂಬುವುದು ಆ ತಾಯಿಗೆ ಮಾತ್ರ ಗೊತ್ತು. ಆದರೂ ತಾಯಿ ಮಗನ ಸಂತೋಷಕ್ಕಾಗಿ ಈ ತ್ಯಾಗ ಮಾಡಿದ್ದಾರೆ. ತಾಯಿ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಫೋನ್ ಗಾಗಿ ವ್ಯರ್ಥ ಮಾಡಿದ್ದಕ್ಕಾಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ತಾಯಿಯನ್ನು ನೋಡಿ ಎಲ್ಲರೂ ಮರಗುತ್ತಿದ್ದಾರೆ. ಹಲವರಂತೂ ತುಂಬಾ ದುಃಖ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋವನ್ನು ಅಂಗಡಿಯವರು ತಮ್ಮ ಅಂಗಡಿಯತ್ತ ಜನರನ್ನು ಸೆಳೆಯುವುದಕ್ಕಾಗಿ ಮಾಡಿದ್ದು, ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಪೋಷಕರು ಮಕ್ಕಳಿಗೆ ಕಷ್ಟಪಟ್ಟು ಸಂಪಾದಿಸಿದ ಹಣದ ಮೌಲ್ಯದ ಕುರಿತು ತಿಳಿಸಬೇಕೆಂದು ಹಲವರು ಹೇಳುತ್ತಿದ್ದಾರೆ. ಕಷ್ಟಗಳನ್ನೇ ನುಂಗಿ ಬದುಕುವ ತಾಯಿಗೆ ಮಕ್ಕಳಾದ ನಾವೂ ಕಷ್ಟವಾಗಬಾರದು. ನೆರಳಾಗುವ ಯತ್ನ ಮಾಡಬೇಕೆಂದು ಹಲವರು ಬುದ್ಧಿ ಹೇಳಿದ್ದಾರೆ.