ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಬಾಂಗ್ಲಾದೇಶದಲ್ಲಿ ಉದ್ಯೋಗ ಕೋಟಾ ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆದಿತ್ತು. ಅದು ಹಿಂಸಾತ್ಮಕ ರೂಪ ಪಡೆದು ನೂರಾರು ಜನರ ಸಾವಿಗೆ ಕಾರಣವಾಗಿತ್ತು. ಹೀಗಾಗಿ ರಾಜೀನಾಮೆ ನೀಡಿ ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದಾರೆ. ಆದರೆ, ಈಗ ಅವರ ವಿರುದ್ಧ ಕೊಲೆ ಕೇಸ್ ದಾಖಲಾಗಿದೆ.
76 ವರ್ಷದ ನಾಯಕಿ ಶೇಖ್ ಹಸೀನಾ ಅವರ ವಿರುದ್ಧ ದಾಖಲಾದ ಮೊದಲ ಪ್ರಕರಣ ಇದಾಗಿದೆ. ಮೊಹಮ್ಮದ್ ಪುರದಲ್ಲಿ ಕೋಟಾ ಸುಧಾರಣಾ ಆಂದೋಲನವನ್ನು ಬೆಂಬಲಿಸುವ ಮೆರವಣಿಗೆಯಲ್ಲಿ ಜುಲೈ 19ರಂದು ಪೊಲೀಸ್ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ ಕಿರಾಣಿ ಅಂಗಡಿಯ ಮಾಲೀಕ ಅಬು ಸೈಯದ್ ಅವರ ಹಿತೈಷಿ, ಶೇಖ್ ಹಸೀನಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಅವಾಮಿ ಲೀಗ್ ನ ಪ್ರಧಾನ ಕಾರ್ಯದರ್ಶಿ ಒಬೈದುಲ್ ಕ್ವಾಡರ್, ಮಾಜಿ ಗೃಹ ಸಚಿವ ಅಸಾದುಝಮಾನ್ ಖಾನ್ ಕಮಾಲ್ ಮತ್ತು ಮಾಜಿ ಪೊಲೀಸ್ ಮಹಾನಿರೀಕ್ಷಕ ಚೌಧುರಿ ಅಬ್ದುಲ್ಲಾ ಅಲ್ ಮಾಮುನ್ ಸೇರಿದಂತೆ ಇನ್ನೂ ಕೆಲವರ ವಿರುದ್ಧ ಪ್ರತಿಭಟನೆ ದಾಖಲಾಗಿದೆ. ಆಗಸ್ಟ್ 5ರಂದು ಶೇಖ್ ಹಸೀನಾ ಸರ್ಕಾರದ ಪತನದ ನಂತರ ದೇಶಾದ್ಯಂತ ಭುಗಿಲೆದ್ದ ಹಿಂಸಾಚಾರದ ಘಟನೆಗಳಲ್ಲಿ ಇಲ್ಲಿಯವರೆಗೆ ಬಾಂಗ್ಲಾದೇಶದಲ್ಲಿ 560ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಈಗ ಅಲ್ಲಿ ಮಧ್ಯತರ ಸರ್ಕಾರ ರಚನೆಯಾಗಿದೆ.