ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಆದರೆ, ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ದರ್ಶನ್ ಗೆ ಸಂಕಷ್ಟ ಎದುರಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೆ ಸುಮಾರು 200 ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲದೆ ಸಾಕ್ಷ್ಯಗಳನ್ನು ಒದ್ದಕ್ಕೊಂದು ಪೂರಕವಾಗಿರುವಂತೆ ಹೊಂದಿಸಿದ್ದಾರೆ. ಈ ಪ್ರಕರಣದಲ್ಲಿ ತಂತ್ರಜ್ಞಾನದ ಬಳಕೆಯನ್ನು ಪೊಲೀಸರು ಮಾಡುತ್ತಿದ್ದು ಸಾಕ್ಷ್ಯವನ್ನು ಇನ್ನಷ್ಟು ಪ್ರಬಲಗೊಳಿಸುತ್ತಿದ್ದಾರೆ. ಇದು ದರ್ಶನ್ ಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.
ಕೊಲೆ ನಡೆದಿರುವ ಶೆಡ್, ದರ್ಶನ್ ಮನೆ, ಸ್ಟೂನಿ ಬ್ರೂಕ್ ರೆಸ್ಟೊರೆಂಟ್, ಶೆಡ್ ಗೆ ಹೋಗುವ ರಸ್ತೆ ಸೇರಿದಂತೆ ಇನ್ನೂ ಹಲವು ಕಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಾಗಿರುವ ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕಿದ್ದಾರೆ. ಕೊಲೆ ನಡೆದ ಸ್ಥಳದಲ್ಲಿ ಚಿತ್ರೀಕರಣ ಮಾಡಲಾಗಿರುವ ಮೊಬೈಲ್ ವಿಡಿಯೋಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಈ ವಿಡಿಯೋ ಸಾಕ್ಷಿಗಳನ್ನು ಇನ್ನಷ್ಟು ಬಲಗೊಳಿಸಲು ವಿಷ್ಯುಯಲ್ ಕಂಪಾರಿಷನ್ ತಂತ್ರಜ್ಞಾನವನ್ನು ಪೊಲೀಸರು ಬಳಸಿದ್ದಾರೆ.
ಸಂಗ್ರಹಿಸಿರುವ ಎಲ್ಲ ವಿಡಿಯೋಗಳನ್ನು ಎಫ್ ಎಸ್ ಎಲ್ ನಲ್ಲಿ ಪರಿಶೀಲನೆಗೆ ಒಳಪಡಿಸಲಾಗಿದೆ. ಜೊತೆಗೆ ಎಲ್ಲ ವಿಡಿಯೋಗಳ ವಿಶುಯಲ್ ಕಂಪಾರಿಷನ್ (ವಿಡಿಯೋಗಳಲ್ಲಿನ ವ್ಯಕ್ತಿಗಳ ಹೋಲಿಕೆ) ಸಹ ಮಾಡಿಸಲಾಗುತ್ತಿದೆ. ಈ ವಿಷ್ಯುಲ್ ಕಂಪಾರಿಷನ್ ನಿಂದ ಬೇರೆ ಬೇರೆ ವಿಡಿಯೋಗಳಲ್ಲಿರುವ ವ್ಯಕ್ತಿಗಳು ಒಬ್ಬರೇ ಹೌದಾ? ಅಥವಾ ಅಲ್ಲವಾ ಎಂಬುವುದು ಗೊತ್ತಾಗುತ್ತದೆ. ಅಲ್ಲದೇ, ವಿಡಿಯೋ ನಕಲಿಯೇ, ಅಸಲಿಯೇ, ಗ್ರಾಫಿಕ್ಸ್ ಮಾಡಲಾಗಿದೆಯೇ ಎಂಬ ಸತ್ಯ ಸಂಗತಿಗಳು ಕೂಡ ತಿಳಿಯುತ್ತವೆ.
ವಿಡಿಯೋದಲ್ಲಿರುವ ವ್ಯಕ್ತಿಗಳ ಕಣ್ಣುಗಳ ಆಕಾರ, ಕಣ್ಣುಗಳ ಬಣ್ಣ, ಕಣ್ಣುಗಳ ನಡುವಿನ ಅಂತರ, ದೇಹದ ಆಕಾರ, ಬಾಯಿ ಹಾಗೂ ತುಟಿಯ ಆಕಾರ, ಮೂಗಿನ ಆಕಾರ ಹಾವಭಾವಗಳನ್ನು ಹೋಲಿಕೆ ಮಾಡಿ ನೋಡಲಾಗುತ್ತದೆ. ಇದರಿಂದಾಗಿ ನ್ಯಾಯಾಲಯದಲ್ಲಿ ವಿಡಿಯೋಗಳು ನಕಲಿ ಅಥವಾ ತಿದ್ದಿದ ವಿಡಿಯೋಗಳು ಅಲ್ಲ ಎನ್ನುವುದು ದೃಢವಾಗುತ್ತದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 17 ಜನರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ದರ್ಶನ್ ಎರಡನೇ ಆರೋಪಿ ಆಗಿದ್ದು, ಪವಿತ್ರಾ ಗೌಡ ಮೊದಲ ಆರೋಪಿ ಆಗಿದ್ದಾರೆ. ಈ ಪ್ರಕರಣದಲ್ಲಿ ಮೂವರು ಸಾಕ್ಷಿಗಳಿದ್ದು, ಅವರನ್ನು ಈಗಾಗಲೇ ತುಮಕೂರು ಜೈಲಿಗೆ ವರ್ಗಾವಣೆ ಮಾಡಲಾಗಿದೆ. ಆರೋಪಿಗಳಿಗೆ ಕೋರ್ಟ್ ಆಗಸ್ಟ್ 18ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.