ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪುವುದಕ್ಕಾಗಿ ಭಾರತ ಸೇರಿದಂತೆ ಕೆಲವು ತಂಡಗಳು ಪೈಪೋಟಿ ನಡೆಸುತ್ತಿವೆ. ಸದ್ಯ ಈ ರೇಸ್ ಗೆ ಈಗ ಶ್ರೀಲಂಕಾ ಕೂಡ ಎಂಟ್ರಿ ಕೊಟ್ಟಿದೆ.
ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ನಲ್ಲಿ ಶ್ರೀಲಂಕಾ ಗೆದ್ದು ಬೀಗುತ್ತಿದ್ದಂತೆ ರೇಸ್ ಗೆ ಎಂಟ್ರಿ ಕೊಟ್ಟಿದೆ. ಈ ಗೆಲುವಿನೊಂದಿಗೆ ಈಗ ಶ್ರೀಲಂಕಾ ತಂಡವು WTC ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಈ ಮೂಲಕ ಫೈನಲ್ಗೇರುವ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಭಾರತ ತಂಡ ಅಗ್ರ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ ಮೂರನೇ ಸ್ಥಾನದಲ್ಲಿದೆ. 48 ಅಂಕಗಳೊಂದಿಗೆ ಶ್ರೀಲಂಕಾ ತಂಡ ಮೂರನೇ ಸ್ಥಾನದಲ್ಲಿದೆ.
ಶ್ರೀಲಂಕಾ ತಂಡ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡು ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು 3-0 ಅಂತರದಿಂದ ಗೆದ್ದರೆ ಎರಡನೇ ಸ್ಥಾನಕ್ಕೆ ಏರಿಕೆ ಕಾಣಲಿದೆ. ಆಸ್ಟ್ರೇಲಿಯಾ ತಂಡವು 90 ಅಂಕಗಳೊಂದಿಗೆ ಒಟ್ಟು ಶೇ. 62.5ರ ಗೆಲುವಿನ ಪ್ರಮಾಣ ಹೊಂದಿದೆ.
ಭಾರತ ತಂಡ 86 ಪಾಯಿಂಟ್ಸ್ ಗಳೊಂದಿಗೆ 71.67 ರಷ್ಟು ಗೆಲುವಿನ ಶೇಕಡಾವಾರು ಹೊಂದಿದೆ. ಅತೀ ಹೆಚ್ಚು ಶೇಕಡಾವಾರು ಹೊಂದಿರುವ ತಂಡಗಳು ಅಂಕ ಪಟ್ಟಿಯಲ್ಲಿ ಮೇಲಿನ ಸ್ಥಾನಗಳಲ್ಲಿವೆ. ಪಟ್ಟಿಯಲ್ಲಿ ಮೊದಲ ಹಾಗೂ ದ್ವಿತೀಯ ಸ್ಥಾನದಲ್ಲಿರುವ ತಂಡಗಳಿಗೆ ಫೈನಲ್ ಆಡುವ ಅವಕಾಶ ನೀಡಲಾಗುತ್ತದೆ.
ಈ ಬಾರಿಯ ಫೈನಲ್ ಪಂದ್ಯ 2025ರ ಜೂನ್ 11 ರಿಂದ 15 ರ ವರೆಗೆ ಇಂಗ್ಲೆಂಡ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ.