ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆ ಘೋಷಣೆಯಾಗುವುದಕ್ಕೂ ಮುನ್ನವೇ ಆ ಕ್ಷೇತ್ರದ ಟಿಕೆಟ್ ಫೈಟ್ ತಾರಕಕ್ಕೆ ಏರಿದೆ. ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಗೆದ್ದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಆ ಕ್ಷೇತ್ರದ ಟಿಕೆಟ್ ಗಾಗಿ ಫೈಟ್ ಶುರುವಾಗಿ ಬಿಟ್ಟಿದೆ. ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹೇಗಾದರೂ ಮಾಡಿ ಸ್ಪರ್ಧಿಸಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಆದರೆ, ಜೆಡಿಎಸ್ ಮಾತ್ರ ಅಡ್ಡಗಾಲು ಹಾಕುವ ತಂತ್ರ ಹೆಣೆಯುತ್ತಲೇ ಇದೆ.
ಈಗಾಗಲೇ ಸಿ.ಪಿ. ಯೋಗೇಶ್ವರ್ ಪ್ರಚಾರ ಕಾರ್ಯ ಆರಂಭಿಸಿದ್ದು, ಯಾರೇ ಸ್ಪರ್ಧಿಸಿದರೂ ನಾನು ಕಣದಲ್ಲಿರುತ್ತೇನೆ ಎಂಬ ಸಂದೇಶವನ್ನು ನೀಡುತ್ತಿದ್ದಾರೆ. ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ತಲೆನೋವಾಗಿ ಪರಿಣಮಿಸಿರುವ ಬೆನ್ನಲ್ಲೇ ಹೆಚ್.ಡಿ. ಕುಮಾರಸ್ವಾಮಿ ಮತ್ತೊಂದು ತಂತ್ರದ ಮೊರೆ ಹೋಗಿದ್ದಾರೆ. ಪ್ರಬಲ ಆಕಾಂಕ್ಷಿಯಾಗಿರುವ ಯೋಗೇಶ್ವರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಜೆಡಿಎಸ್ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಲೆಕ್ಕಾಚಾರದಲ್ಲಿದ್ದಾರೆ.
ಹೀಗಾಗಿ ಯೋಗೇಶ್ವರ್ ಮನವೊಲಿಸುವ ಕಾರ್ಯಕ್ಕೆ ಕುಮಾರಸ್ವಾಮಿ ಮುಂದಾಗಿದ್ದಾರೆ. ಸಿಪಿ ಯೋಗೇಶ್ವರ್ ಜತೆ ಮಾತುಕತೆ ನಡೆಸಿ ಅವರಿಗೆ ಕೇಂದ್ರದಲ್ಲಿ ನಿಗಮ ಮಂಡಳಿ ಸ್ಥಾನದ ಆಫರ್ ನೀಡಲು ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ. ಈ ಮೂಲಕ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸುವ ಪ್ರಯತ್ನವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ.
ಇನ್ನೊಂದೆಡೆ ಯೋಗೇಶ್ವರ್ ಕೂಡ ಟಿಕೆಟ್ ಗಾಗಿ ಪ್ರಯತ್ನಿಸುತ್ತಿದ್ದು, ಕರ್ನಾಟಕ ನಾಯಕರು ಕೂಡ ಅವರ ಮನವೊಲಿಸವು ಯತ್ನ ಮಾಡುತ್ತಿದ್ದಾರೆ. ಆದರೆ, ಅಂತಿಮವಾಗಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.