ಬೆಳಗಾವಿ: ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಅನುಭವಿಸಿದ್ದಕ್ಕೆ ಸಾಕ್ಷಿ ಎಂಬಂತೆ ವಿಡಿಯೋ ಹಾಗೂ ಫೋಟೋ ವೈರಲ್ ಆಗಿದ್ದವು. ಹೀಗಾಗಿ ಸರ್ಕಾರ ಗರಂ ಆಗಿತ್ತು. ಸಿಎಂ ಸಿದ್ದರಾಮಯ್ಯ ಅವರು ಬೇರೆ ಜೈಲಿಗೆ ಸ್ಥಳಾಂತರಿಸುವಂತೆ ಸೂಚಿಸಿದ್ದರು. ಕೋರ್ಟ್ ಕೂಡ ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ಆದೇಶ ನೀಡಿತ್ತು. ಈ ಬೆನ್ನಲ್ಲೇ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಆದರೆ, ಈಗ ಹಲವು ಜೈಲಿನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.
ವಿಚಾರಣಾಧೀನ ಕೈದಿ ದರ್ಶನ್ ಸಿಗರೇಟ್ ಸೇದಿದ ಫೊಟೋ ವೈರಲ್ ಆದ ಬೆನ್ನಲ್ಲಿಯೇ ಆತನ ಗ್ಯಾಂಗ್ ನ್ನು ರಾಜ್ಯದ ವಿವಿಧ ಜಿಲ್ಲೆಗಳ ಜೈಲಿಗೆ ದಿಕ್ಕಾಪಾಲು ಮಾಡಲಾಗಿದೆ. ಈಗ ಬೆಳಗಾವಿಯ ಹಿಂಡಲಗಾ ಜೈಲಿನ ಕೈದಿಗಳು ದರ್ಶನ್ ಗೆ ಜೈಲಿನಲ್ಲಿ ಸಿಗರೇಟ್ ನೀಡಬಹುದು. ನಮಗೆ ಏಕಿಲ್ಲ? ಎಂದು ಪ್ರಶ್ನಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ಆಂಡ್ ಟೀಮ್ ನ 13 ಜನರ ಪೈಕಿ 10 ಜನರನ್ನು ರಾಜ್ಯದ ವಿವಿಧ ಜೈಲುಗಳಿಗೆ ಕಳುಹಿಸಲಾಗಿದೆ. ಎ2 ದರ್ಶನ್ ನನ್ನು ಬಳ್ಳಾರಿಯ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ. ದರ್ಶನ್ ನ ಆಪ್ತ ಸ್ನೇಹಿತ ಪ್ರದೂಶ್ ನನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಬೆಳಗಾವಿ ಹಿಂಡಲಗಾ ಜೈಲು ಸಿಬ್ಬಂದಿ ಅಲರ್ಟ್ ಆಗಿ ಜೈಲಿನೊಳಗೆ ಬೀಡಿ, ಸಿಗರೇಟ್, ತಂಬಾಕು ಸೇರಿದಂತೆ ಎಲ್ಲ ಧೂಮಪಾನ ಮತ್ತು ಗುಟ್ಕಾ ವಸ್ತುಗಳನ್ನು ನಿಷೇಧಿಸಿದ್ದಾರೆ.
ಆದರೆ, ಬೆಳಗಾವಿಯ ಹಿಂಡಲಗಾ ಜೈಲಿನ ಅಧಿಕಾರಿಗಳ ಖಡಕ್ ನಿರ್ಧಾರದಿಂದ ಕಂಗೆಟ್ಟ ಕೈದಿಗಳು ತಮಗೆ ಗುಟ್ಕಾ, ತಂಬಾಕು, ಬೀಡಿ, ಸಿಗರೇಟ್ ಬೇಕೇ ಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ.
ಜೈಲಿನ ಕೈದಿಗಳ ಪೈಕಿ ಬಹುತೇಕರು ತಮಗೆ ಬೀಡಿ, ಸಿಗರೇಟ್, ತಂಬಾಕು ನೀಡುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ನಾವು ಹಣ ಕೊಟ್ಟು ಮನೆಯವರಿಂದ ಗುಟ್ಕಾ, ಸಿಗರೇಟ್, ಬೀಡಿ ತರಿಸಿಕೊಳ್ಳುತ್ತೇವೆ. ನಮ್ಮ ಚಟಗಳನ್ನು ಬಿಟ್ಟಿರಲು ಸಾಧ್ಯವಿಲ್ಲ. ನೀವು ನಮಗೆ ಬೀಡಿ, ಸಿಗರೇಟ್, ತಂಬಾಕು ಕೊಡುವವರಗೆ ನಾವು ತಿಂಡಿ ತಿನ್ನಲ್ಲ, ಊಟ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ.