ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಿಂದ ಬಳ್ಳಾರಿಯ ಸೆಂಟ್ರಲ್ ಜೈಲಿಗೆ ಸ್ಥಳಾಂತರಗೊಂಡಿದ್ದಾರೆ. ಆದರೆ, ದರ್ಶನ್ ಭರ್ಜರಿ ಉಡುಗೆ ತೊಡುಗೆಗಳೊಂದಿಗೆ ಜೈಲಿನೊಳಕ್ಕೆ ಎಂಟ್ರಿಯಾಗಿದ್ದಾರೆ. ಸದ್ಯ ಇದು ಕೂಡ ಈಗ ಚರ್ಚೆಯಾಗುತ್ತಿದೆ.
ಸಿನಿಮಾದಲ್ಲಿ ಹೀರೋ ಎಂಟ್ರಿಕೊಟ್ಟಂತೆಯೇ ಜೈಲಿಗೂ ದರ್ಶನ್ ಎಂಟ್ರಿ ಕೊಟ್ಟಿದ್ದಾರೆ. ಈಗ ಚರ್ಚೆಯಾಗುತ್ತಿರುವುದು ದರ್ಶನ್ ತೊಟ್ಟ ಬಟ್ಟೆ, ಹಾಕಿರುವ ಕೂಲಿಂಗ್ ಗ್ಲಾಸ್, ವ್ರಿಸ್ಟ್ ಬ್ಯಾಂಡ್, ಪುಲ್ ಓವರ್. ಇವುಗಳೆಲ್ಲ ಅರ್ಧ ಲಕ್ಷ ರೂ. ಮೀರಿದ್ದಾಗಿದ್ದು, ಅವರು ಓರ್ವ ಕೈದಿಯಂತೆ ಕಾಣಿಸದಿರುವುದು ಕೂಡ ವಿಚಿತ್ರವಾಗಿ ಕಂಡಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂಬ ಕಾರಣಕ್ಕೆ ಕೋರ್ಟ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಿದೆ. ಆದರೆ, ಬಳ್ಳಾರಿ ಜೈಲಿಗೆ ದರ್ಶನ್ ಬಂದಿರುವ ರೀತಿ ಕೂಡ ಐಷಾರಾಮಿಯಂತೆಯೇ ಗೋಚರಿಸುತ್ತಿದೆ.
ಪೊಲೀಸ್ ವ್ಯಾನಿನಿಂದ ಇಳಿದು ಜೈಲಿಗೆ ಎಂಟ್ರಿಯಾದ ದರ್ಶನ್ ಬ್ರಾಂಡೆಡ್ ಟೀ ಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದರು. ಅವರು ಧರಿಸಿದ್ದ ಪ್ಯೂಮಾ ಟೀಶರ್ಟ್ ಬೆಲೆ 10 ಸಾವಿರ ರೂ., ಕೂಲಿಂಗ್ ಗ್ಲಾಸ್ ನ ಬೆಲೆ ಏನಿಲ್ಲವೆಂದರೂ 1 ಲಕ್ಷ ರೂ. ನದ್ದಾಗಿದೆ. 25 ಸಾವಿರ ಮೌಲ್ಯದ ಪುಲ್ ಓವರ್ ಧರಿಸಿದ್ದರು. ಅವರು ಧರಿಸಿದ್ದ ಬ್ರಾಂಡೆಡ್ ಜೀನ್ಸ್ ಏನಿಲ್ಲವೆಂದರೂ 30 ಸಾವಿರ ರೂ., ಎಡಗೈಗೆ ಹಾಕಿದ್ದ ವ್ರಾಪ್ ಬ್ಯಾಂಡ್ ನ ಬೆಲೆ ಕನಿಷ್ಟವೆಂದರೂ 5 ಸಾವಿರ ರೂ. ಎನ್ನಲಾಗಿದೆ.
ನಟ ದರ್ಶನ್ ಹೀಗೆ ಐಷಾರಾಮಿ ಉಡುಪು ತೊಟ್ಟು ಜೈಲಿಗೆ ಎಂಟ್ರಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಜೈಲಿಗೆ ಬಂದವರಂತೆ ದರ್ಶನ್ ಬಂದೇ ಇಲ್ಲ. ಅವರು ಸಿನಿಮಾ ಶೂಟಿಂಗ್ ಗೆ ಬಂದಂತೆ ಬಂದಿದ್ದಾರೆ. ರಾಜಾತಿಥ್ಯದಿಂದಾಗಿಯೇ ದರ್ಶನ್ ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಶಿಫ್ಟ್ ಆಗಿದ್ದಾರೆ. ಆದರೆ, ಅವರ ಎಂಟ್ರಿ ಮಾತ್ರ ಇಲ್ಲೂ ಕೂಡ ಐಷಾರಾಮಿಯಲ್ಲೇ ಇರಲಿದ್ದಾರಾ ಎಂಬ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ 6106 ಎಂಬ ಕೈದಿ ನಂಬರ್ ನೀಡಲಾಗಿತ್ತು. ಆದರೆ, ಬಳ್ಳಾರಿ ಜೈಲಿನಲ್ಲಿ 511 ಕೈದಿ ನಂಬರ್ ನೀಡಬಹುದು ಎನ್ನಲಾಗುತ್ತಿದೆ.