ತಂದೆ – ಹಾಗೂ ಮಗನ ಜಗಳದಿಂದಾಗಿ ಐವರು ಗಂಭೀರವಾಗಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಮಹಾರಾಷ್ಟ್ರದ ಅಂಬರ್ ನಾಥದಲ್ಲಿ ನಡೆದಿದೆ. ತಂದೆಯ ಕಾರಿಗೆ ಮಗ ಡಿಕ್ಕಿ ಹೊಡೆಸಿ, ಹಲವರು ಗಂಭೀರವಾಗಿ ಗಾಯಗೊಳ್ಳುವಂತೆ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ಮನೆಯ ಸಮಸ್ಯೆಯನ್ನು ನಿಮ್ಮ ಮನೆಯಲ್ಲಿಯೇ ಇಟ್ಟುಕೊಳ್ಳಿ. ಆಚೆ ತಂದು ಜನರಿಗೆ ಯಾಕೆ ತೊಂದರೆ ಕೊಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಗ ಬಿಂದೇಶ್ವರ್ ಶರ್ಮಾ ಹಾಗೂ ತಂದೆ ಸತೀಶ್ ಶರ್ಮಾ ಮಧ್ಯದ ಜಗಳ ಈ ದುರಂತಕ್ಕೆ ಕರಾಣವಾಗಿದೆ. ತಂದೆ ಸತೀಶ್ ಶರ್ಮಾ ಅವರು ನಿವೃತ್ತ ಹಿರಿಯ ರಕ್ಷಣಾ ಅಧಿಕಾರಿ . ತಮ್ಮ ಮಗ ಮತ್ತು ಸೊಸೆಯ ಮಧ್ಯೆ ಜಗಳ ನಡೆದಿದ್ದಕ್ಕೆ ಅದನ್ನು ಬಗೆಹರಿಸಲು ಥಾಣೆಯ ಅಂಬರನಾಥ್ ಗೆ ಬಂದಿದ್ದರು. ಮಗ ಬಿಂದೇಶ್ವರನ ಮನೆಗೆ ಹೋಗಿದ್ದಾಗ ಅಲ್ಲಿ ಮಗ ಇರಲಿಲ್ಲ. ಹೀಗಾಗಿ ಸೊಸೆಗೆ ಬುದ್ಧಿ ಹೇಳಿ ಮುಂಬೈಗೆ ತೆರಳಲು ಮುಂದಾಗಿದ್ದರು. ಅಂಬರನಾಥ್ ನಲ್ಲಿನ 7 ಸ್ಟಾರ್ ಹೋಟೆಲ್ ಹತ್ತಿರ ಬಂದಾಗ ಮಗ ಬಿಂದೇಶ್ವರ್ ನ ಕಾರು ವೇಗವಾಗಿ ಬರುವುದನ್ನು ಕಂಡಿದ್ದಾರೆ. ಹೀಗಾಗಿ ತಮ್ಮನ್ನು ಮಾತನಾಡಲು ಬಯಸಿದ್ದಾನೆಂದು ಭಾವಿಸಿದ್ದ ತಂದೆ ತನ್ನ ಡ್ರೈವರ್ ಬಳಿ ಕಾರನ್ನು ರಸ್ತೆ ಬದಿ ನಿಲ್ಲಿಸುವಂತೆ ಹೇಳಿ, ತಾವು ಕಾರಿನಿಂದ ಇಳಿದಿದ್ದಾರೆ.
ಆದರೆ, ಮಗ ಮಾತ್ರ ಕಾರು ನಿಲ್ಲಿಸದೆ ತಂದೆಯ ಕಾರನ್ನು ಓವರ್ ಟೇಕ್ ಮಾಡಿ, ಡ್ರೈವರ್ ನಿಗೆ ಡಿಕ್ಕಿ ಹೊಡೆಸಿ ಸುಮಾರು 100 ಅಡಿ ಮುಂದೆ ಎಳೆದುಕೊಂಡು ಹೋಗಿದ್ದಾನೆ. ನಂತರ ಕಾರನ್ನು ಯು ಟರ್ನ್ ಮಾಡಿ ತಂದೆಯ ಕಾರಿಗೆ ಗುದ್ದಿದ್ದಾನೆ. ಇದರಿಂದ ಅವರ ತಂದೆಯ ಕಾರಿನ ಹಿಂಭಾಗದಲ್ಲಿ ನಿಲ್ಲಿಸಿದ್ದ ಬೈಕ್ ಗಳಿಗೆ ಹಾನಿಯಾಗಿದೆ. ಅಲ್ಲದೇ, ತಂದೆಯ ಕಾರಿನ ಡ್ರೈವರ್ ಹಾಗೂ ಬೈಕ್ ನಲ್ಲಿದ್ದ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಐವರು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ.