ಗುವಾಹಟಿ: ಮಕ್ಕಳಿಗೆ ಜ್ಞಾನ ಹೇಳಿಕೊಡಬೇಕಾಗಿದ್ದ ಶಿಕ್ಷಕನೇ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಅಶ್ಲೀಲ ವಿಡಿಯೋ ನೋಡುವಂತೆ ಒತ್ತಾಯಿಸಿರುವ ಘಟನೆ ನಡೆದಿದೆ.
ಅಸ್ಸಾಂನ (Assam) ಕರೀಂಗಂಜ್ (Karimganj)ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕನ ವಿರುದ್ಧ ಈ ಕುರಿತು ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿಯೊಬ್ಬಳು ತರಗತಿಯಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವಂತೆ ಒತ್ತಾಯಿಸಿರುವ ಕುರಿತು ಆರೋಪಿಸಿರುವ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.
ಕರೀಮ್ ಗಂಜ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪಾರ್ಥ ಪ್ರತಿಮ್ ದಾಸ್ ಈ ಕುರಿತು ಮಾತನಾಡಿ, ಆಗಸ್ಟ್ 12 ರಂದು ನಡೆದಿದೆ. ಪೊಲೀಸರು ಶಿಕ್ಷಕರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಹಲವಾರು ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ ಎಂದಿದ್ದಾರೆ.
ವಿದ್ಯಾರ್ಥಿನಿ ಈ ವಿಷಯವನ್ನು ಆಕೆಯ ತಾಯಿಯ ಮುಂದೆ ಹೇಳಿದ್ದಾಳೆ. ಶಿಕ್ಷಕರು ಅಶ್ಲೀಲ ವಿಡಿಯೊ ವೀಕ್ಷಿಸುವಂತೆ ಒತ್ತಾಯಿಸಿದ್ದು, ಆಕೆಯನ್ನು ಅನುಚಿತವಾಗಿ ಮುಟ್ಟಿದ್ದಾರೆ ಎಂದು ವಿದ್ಯಾರ್ಥಿನಿ ಹೇಳಿರುವುದಾಗಿ ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ.
ಕೋಪಗೊಂಡ ಸ್ಥಳೀಯರು ಶಿಕ್ಷಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಆದರೆ ಶಿಕ್ಷಕ ತಪ್ಪಿಸಿಕೊಂಡಿದ್ದಾನೆ. ರೊಚ್ಚಿಗೆದ್ದ ಗುಂಪೊಂದು ಶಾಲೆಯನ್ನು ಧ್ವಂಸಗೊಳಿಸಿ, ಬೆಂಕಿ ಹಚ್ಚಿದ್ದಾರೆ. ಸರ್ಕಾರಿ ಆಸ್ತಿಗೆ ಹಾನಿ ಮಾಡಿರುವುದರಿಂದ ಅವರ ವಿರುದ್ಧವೂ ಪ್ರಕರಣ ದಾಖಲಿಸುತ್ತೇವೆ. ಸದ್ಯಕ್ಕೆ ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.