ಮುಂಬಯಿ: 18ನೇ ಆವೃತ್ತಿಯ ಐಪಿಎಲ್(Indian Premier League) ಗೆ ಸಂಬಂಧಿಸಿದಂತೆ ಹಲವಾರು ವಿಷಯಗಳು ಚರ್ಚೆಯಲ್ಲಿವೆ. ಈ ಚರ್ಚೆಯಲ್ಲಿ ಶುಕ್ರವಾರ ಮತ್ತೊಂದು ಸುದ್ದಿ ಸೇರ್ಪಡೆಯಾಗಿದ್ದು, ಧೋನಿ ಅಭಿಮಾನಿಗಳು (MS Dhoni Fans) ಖುಷಿ ಪಡುವಂತಾಗಿದೆ.
ವರದಿಯೊಂದರ ಪ್ರಕಾರ ಬಿಸಿಸಿಐ(BCCI) ಕನಿಷ್ಠ ಐದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದ ಆಟಗಾರರನ್ನು ಅನ್ ಕ್ಯಾಪ್ಡ್ ವಿಭಾಗದಲ್ಲಿ ಇರಿಸುವ ನಿಯಮ ಮರಳಿ ಜಾರಿಗೆ ತರಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಮೊದಲ ಸೀಸನ್ ವೇಳೆ ಜಾರಿಯಲ್ಲಿದ್ದ ಈ ನಿಯಮವನ್ನು 2021ರಲ್ಲಿ ರದ್ದುಗೊಳಿಸಲಾಗಿತ್ತು. ಆದರೆ, ಇತ್ತೀಚೆಗೆ ನಡೆದಿದ್ದ ಸಭೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫ್ರಾಂಚೈಸಿ ಈ ನಿಯಮ ಜಾರಿಗೆ ತರುವಂತೆ ಒತ್ತಾಯಿಸಿತ್ತು. ಅದರಂತೆ ಈಗ ಬಿಸಿಸಿಐ ಮತ್ತೆ ಈ ನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ ಎನ್ನಲಾಗಿದೆ. ಒಂದು ವೇಳೆ ಈ ಸುದ್ದಿ ನಿಜವಾದರೆ ಎಂ.ಎಸ್. ಧೋನಿ(MS Dhoni) ಮುಂದಿನ ಬಾರಿಯೂ ಐಪಿಎಲ್ ಆಡುವುದು ಖಚಿತ ಎನ್ನಲಾಗಿದೆ. ಹೀಗಾಗಿ ಈ ನಿಯಮ ನಿಜವಾಗಿಯೂ ಜಾರಿಯಾಗಲಿ ಎಂದು ಅಭಿಮಾನಿಗಳು ಬೇಡಿಕೊಳ್ಳುತ್ತಿದ್ದಾರೆ.
ಧೋನಿ(MS Dhoni) ಅವರು ಕಳೆದ ವರ್ಷವೇ ಐಪಿಎಲ್ ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಹಿನ್ನೆಲೆಯಲ್ಲಿ ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿ ಎಂದೇ ಹೇಳಲಾಗಿತ್ತು. ಆದರೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಅಂತಿಮ ನಿರ್ಧಾರವನ್ನು ಇದುವರೆಗೂ ಪ್ರಕಟಿಸಿಲ್ಲ.
ಅನ್ ಕ್ಯಾಪ್ಡ್ ಆಟಗಾರನಿಗೆ ಫ್ರಾಂಚೈಸಿ ಕೇವಲ 4 ಕೋಟಿ ರೂ. ನೀಡಲಿದೆ. ಒಂದು ವೇಳೆ ಇದೇ ನಿಯಮ ಮುಂದುವರೆದರೆ ಧೋನಿ ಇದೇ ಮೊತ್ತದಲ್ಲಿ ಚೆನ್ನೈಗಾಗಿ ಆಟ ಮುಂದುವರೆಸಲಿದ್ದಾರೆ. ಇದೇ ಮೊತ್ತಕ್ಕೆ ಚೆನ್ನೈ ತಂಡ ಧೋನಿಯನ್ನು ಮತ್ತೆ ರೀಟೈನ್ ಮಾಡಿಕೊಳ್ಳಬಹುದು. 2022ರ ಮೆಗಾ ಹರಾಜಿನ ಮೊದಲು, ಚೆನ್ನೈ ಫ್ರಾಂಚೈಸಿ 12 ಕೋಟಿ ರೂ. ಗೆ ಧೋನಿಯನ್ನು ತಂಡದಲ್ಲಿ ಉಳಿಸಿಕೊಂಡಿತ್ತು. ಆದರೆ, ಧೋನಿ ನಿರ್ಧಾರ ಏನು ಎಂಬುವುದನ್ನು ಕಾಯ್ದು ನೋಡಬೇಕಿದೆ.