ಕಲಬುರಗಿ: ವ್ಯಕ್ತಿಯೊಬ್ಬ ತನ್ನ ಪತ್ನಿ ತವರಿಗೆ ಹೋಗಿ ಮರಳಿ ಬಾರದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೈ ಮೇಲೆ ಡೀಸೆಲ್ ಸುರಿದು ಬೆಂಕಿ ಹಂಚಿಕೊಂಡು ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಫತ್ತೆಪುರ ಗ್ರಾಮದಲ್ಲಿ ನಡೆದಿದೆ. ಮಹೇಶ್ ಮಾರುತಿ ನಾಗೇನಕರ್ (27) ಸಾವನ್ನಪ್ಪಿದ ದುರ್ದೈವಿ. ಮೃತ ಮಹೇಶ್ ಮೂಲತಃ ಬೀದರ್ ಜಿಲ್ಲೆಯ ರೇಕುಳಗಿ ಗ್ರಾಮದ ನಿವಾಸಿಯಾಗಿದ್ದಾರೆ. ಕಲಬುರಗಿ ಜಿಲ್ಲೆಯ ಫತ್ತೆಪುರ ಗ್ರಾಮದ ಈಶ್ವರಿ ಎಂಬ ಮಹಿಳೆಯನ್ನು ಮದುವೆಯಾಗಿದ್ದ. ಆರಂಭದಲ್ಲಿ ಪತಿ-ಪತ್ನಿ ಚೆನ್ನಾಗಿಯೇ ಇದ್ದರು. ಸಂಸಾರ ಬಂಡಿ ನಗುತ್ತಾ ಸಾಗುತ್ತಿರುವಾಗ ಇಬ್ಬರ ಮಧ್ಯೆ ಕಲಹ ಉಂಟಾಗಿದೆ.
ಹೀಗಾಗಿ ಮಹಿಳೆ ಗಂಡನ ಮನೆ ಬಿಟ್ಟು ತವರು ಮನೆ ಸೇರಿದ್ದರು ಎನ್ನಲಾಗಿದೆ. ತವರಿಗೆ ಹೋದ ಪತ್ನಿ ವಾಪಸ್ ಬಾರದಿದ್ದಕ್ಕೆ ಮಹೇಶ್ ಕೂಡ ಹೆಂಡತಿಯ ತವರು ಮನೆಗೆ ಬಂದು ನೆಲೆಸಿದ್ದ. ಆದರೆ ಶುಕ್ರವಾರ ಅದೇನಾಯಿತೋ ಗೊತ್ತಿಲ್ಲ. ಟ್ರ್ಯಾಕ್ಟರ್ ಗೆ ಹಾಕಲು ಡೀಸೆಲ್ ಬೇಕಾಗಿದೆ ಎಂದು ತೆಗೆದುಕೊಂಡು ಹೋದವನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸ್ಥಳಕ್ಕೆ ಚಿಂಚೋಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪತ್ನಿ ಮರಳಿ ತನ್ನ ಮನೆಗೆ ಬಾರದಿರುವುದಕ್ಕೆ ಆತ್ಮಹತ್ಯೆ ಮಾಡಿಕೊಂಡನೆ? ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣವೇ? ಆನಾರೋಗ್ಯವೇ? ಜೀವನದಲ್ಲಿ ಜುಗುಪ್ಸೆಯಿಂದ ಈ ರೀತಿ ಮಾಡಿಕೊಂಡನೇ ತಿಳಿಯದಾಗಿದೆ.