ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಅಭಿಯಾನ ಕೇವಲ 6 ಪದಕಗಳೊಂದಿಗೆ ಅಂತ್ಯವಾಗಿದೆ. ಇನ್ನುಳಿದಂತೆ ಕೆಲವು ಆಟಗಾರರ ಪ್ರದರ್ಶನ ಕೂಡ ಅದ್ಭುತವಾಗಿತ್ತು. ಈ ಮಧ್ಯೆ ಶೂಟಿಂಗ್ ನ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಟೀಮ್ ನಲ್ಲಿ ಮನು ಭಾಕರ್ ಜೊತೆ ಕಂಚಿನ ಪದಕ ಗೆದ್ದ ಹರಿಯಾಣದ ಸರಬ್ಜೋತ್ ಸಿಂಗ್ ಅವರು ಸರ್ಕಾರ ನೀಡಲು ಮುಂದಾಗಿದ್ದ ಸರ್ಕಾರಿ ಕೆಲಸವನ್ನು ತಿರಸ್ಕರಿಸಿದ್ದಾರೆ.
ಪದಕ ಗೆದ್ದ ವಿಜೇತರಿಗೆ ರಾಜ್ಯ ಸರ್ಕಾರಗಳು ಗೌರವಧನ ನೀಡಿ ಗೌರವಿಸುತ್ತಿವೆ. ಅಲ್ಲದೇ, ಸರ್ಕಾರಿ ಉದ್ಯೋಗವನ್ನೂ ನೀಡುತ್ತಿವೆ. ಆದರೆ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತ ಆಟಗಾರನೊಬ್ಬ ರಾಜ್ಯ ಸರ್ಕಾರ ನೀಡಿದ ಎರಡೆರಡು ಸರ್ಕಾರಿ ಕೆಲಸವನ್ನು ತಿರಸ್ಕರಿಸಿದ್ದಾರೆ.
ಸರಬ್ಜೋತ್ ಸಿಂಗ್ ರೈತನ ಮಗ. ಚಂಡೀಗಢದಲ್ಲಿ ವ್ಯಾಸಂಗ ಮುಗಿಸಿದ್ದಾರೆ. ಇದಕ್ಕೂ ಮೊದಲು 2019ರ ಜೂನಿಯರ್ ವಿಶ್ವಕಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅಲ್ಲದೇ, 2022 ರ ಏಷ್ಯನ್ ಗೇಮ್ಸ್ ನಲ್ಲಿ ಭಾರತೀಯ ಶೂಟಿಂಗ್ ತಂಡದ ಭಾಗವಾಗಿ ಚಿನ್ನ ಗೆದ್ದಿದ್ದರು. ನಂತರ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು.
ಈಗ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚು ಗೆಲ್ಲುವ ಮೂಲಕ ಭಾರತ ಹೆಮ್ಮೆಪಡುವಂತೆ ಮಾಡಿದ್ದಾರೆ. ಹೀಗಾಗಿ ಹರಿಯಾಣ ಮತ್ತು ಪಂಜಾಬ್ ಸರ್ಕಾರವು ಕ್ರೀಡಾ ಇಲಾಖೆಯಲ್ಲಿ ಉಪನಿರ್ದೇಶಕ ಹುದ್ದೆಯನ್ನು ನೀಡಲು ಮುಂದಾಗಿದೆ. ಅಲ್ಲದೇ, ಇದರೊಂದಿಗೆ ಹರಿಯಾಣ ಸರ್ಕಾರದಿಂದ 2.50 ಕೋಟಿ ರೂಪಾಯಿ ನಗದು ಬಹುಮಾನವನ್ನೂ ನೀಡಲಾಗಿದೆ. ಆದರೆ, 22 ವರ್ಷದ ಸರಬ್ಜೋತ್ ಸಿಂಗ್ ಅವರು ಹರಿಯಾಣ ಮತ್ತು ಪಂಜಾಬ್ ಸರ್ಕಾರಗಳು ನೀಡಿದ್ದ ಉದ್ಯೋಗಗಳನ್ನು ತಿರಸ್ಕರಿಸಿದ್ದಾರೆ. ಕೆಲಸ ನೀಡಿದ್ದಕ್ಕೆ ಸಂತೋಷ. ಆದರೆ, ನನಗೆ ಶೂಟಿಂಗ್ ಮೇಲೆ ಹೆಚ್ಚು ಆಸಕ್ತಿ ಇದೆ. ಹೀಗಾಗಿ ಸದ್ಯಕ್ಕೆ ಶೂಟಿಂಗ್ ಆಡುವುದನ್ನು ಬಿಟ್ಟು ನಾನು ಬೇರೆ ಏನೂ ಮಾಡುವುದಿಲ್ಲ ಎಂದು ಹೇಳಿದ್ದಾರೆ.