ಢಾಕಾ: ಹಿಂಸಾಚಾರದ ನಂತರ ಶಾಂತವಾಗಿದ್ದ ಬಾಂಗ್ಲಾದೇಶ ಮತ್ತೆ ಹಿಂಸಾರೂಪಕ್ಕೆ ಕಾರಣವಾಗಿದೆ. 200ಕ್ಕೂ ಅಧಿಕ ಜನರು ಸಾವನ್ನಪ್ಪಿದ ನಂತರ ಶಾಂತಯುತವಾಗಿದ್ದ ಅಲ್ಲಿ ಮತ್ತೆ ಘರ್ಷಣೆ ಆರಂಭವಾಗಿದ್ದು, 32 ಜನ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಹೀಗಾಗಿ ಭಾರತೀಯ ಮೂಲದವರಿಗೆ ಎಚ್ಚರಿಕೆ ನೀಡಲಾಗುತ್ತಿದೆ.
ಪ್ರತಿಭಟನಾಕಾರರು ಹಾಗೂ ಆಡಳಿತಾರೂಢ ಅವಾಮಿ ಲೀಗ್ ಬೆಂಬಲಿಗರ ನಡುವಿನ ಸಂಘರ್ಷಕ್ಕೆ ಕೆಲವರು ಬಲಿಯಾಗಿದ್ದರೆ, ಹಲವರು ಗಾಯಗೊಂಡಿದ್ದಾರೆ. ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಹತ್ತಾರು ಸಾವಿರ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಹಾಗೂ ಸ್ಟನ್ ಗ್ರೆನೇಡ್ ಬಳಸಿದ್ದಾರೆ. ಹೀಗಾಗಿ ಹಿಂಸಾಚಾರ ನಡೆಯುವಂತಾಗಿದೆ. ಈಗಾಗಲೇ ದೇಶಾದ್ಯಂತ ಅನಿರ್ದಿಷ್ಟಾವಧಿ ನಿಷೇಧಾಜ್ಞೆಯನ್ನು ಬಾಂಗ್ಲಾ ಸರ್ಕಾರ ಘೋಷಿಸಿದೆ. ಕಳೆದ ಜುಲೈ ತಿಂಗಳಲ್ಲಿ ಹಿಂಸಾಚಾರ ಆರಂಭವಾದ ನಂತರ ಅಲ್ಲಿನ ಸರ್ಕಾರ ಇದೇ ಮೊದಲ ಬಾರಿಗೆ ಕರ್ಫ್ಯೂ ಘೋಷಿಸಿದೆ.
ಸರ್ಕಾರಿ ಉದ್ಯೋಗಗಳಲ್ಲಿನ ಕೋಟಾ ವ್ಯವಸ್ಥೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಬಾಂಗ್ಲಾದೇಶದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ದೇಶಾದ್ಯಂತ 200ಕ್ಕೂ ಅಧಿಕ ಜನ ಗಲಭೆಗಳಲ್ಲಿ ಜೀವ ಕಳೆದುಕೊಂಡಿದ್ದಾರೆ. ಢಾಕಾದಲ್ಲಿ ಹಿಂಸಾಚಾರ ತೀವ್ರ ಸ್ವರೂಪ ಪಡೆದಿದೆ. ಭಾನುವಾರ ರಾಜಧಾನಿಯಲ್ಲಿನ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟನಾಕಾರರು ಸಂಚಾರಕ್ಕೆ ಅಡ್ಡಿಪಡಿಸಿದರು. ಪೊಲೀಸರ ಜತೆ ಘರ್ಷಣೆ ನಡೆಸಿದರು. ಈ ವೇಳೆ ಆಡಳಿತಾರೂಢ ಅವಾಮಿ ಲೀಗ್ ಬೆಂಬಲಿಸುವ ಗುಂಪುಗಳು ಪ್ರತಿಭಟನಾಕಾರರಿಗೆ ಮುಖಾಮುಖಿಯಾದವು.
ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಬೆಂಬಲದೊಂದಿಗೆ ವಿದ್ಯಾರ್ಥಿಗಳು ಹಾಗೂ ಕೆಲವು ಸಂಘಟನೆಗಳು ‘ಅಸಹಕಾರ’ಕ್ಕೆ ಕರೆ ನೀಡಿದ್ದವು. ಅದು ಈಗ ಅಕ್ಷರಶಃ ಹಿಂಸಾರೂಪ ಪಡೆದಿದೆ. ಹೀಗಾಗಿ ಬಾಂಗ್ಲಾದೇಶದಲ್ಲಿನ ಭಾರತೀಯರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲಿರುವ ಭಾರತೀಯ ಸಹಾಯಕ ಹೈಕಮಿಷನ್‌ನ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಭಾರತೀಯ ಪ್ರಜೆಗಳು ಕಚೇರಿ ಜತೆ ಸಂಪರ್ಕದಲ್ಲಿ ಇರುವಂತೆ ಹಾಗೂ ಜಾಗರೂಕರಾಗಿ ಇರುವಂತೆ ಹೇಳಲಾಗಿದೆ. ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ +88-01313076402 ಸಂಖ್ಯೆ ಸಂಪರ್ಕಿಸಬೇಕು ಎಂದು ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ.