ಅಪ್ರಾಪ್ತ ಚಾಲಕ ಚಲಾಯಿಸುತ್ತಿದ್ದ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಲ್ಲದೇ, ಘಟನೆಯಲ್ಲಿ ಮಗಳ ಸ್ಥಿತಿ ಚಿಂತಾಜನಕವಾಗಿದೆ.
ಈ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಅಲ್ಲಿನ ಸಾಕೇತ್ ನಗರ ರಸ್ತೆಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿಯೇ 42 ವರ್ಷದ ಭಾವನಾ ಮಿಶ್ರಾ ಸಾವನ್ನಪ್ಪಿದ್ದಾರೆ. ಅವರ 13 ವರ್ಷದ ಮಗಳು ಮೇಧಾವಿ ಮಿಶ್ರಾ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇತ್ತೀಚಿಗೆ ಅಪ್ರಾಪ್ತ ಮಕ್ಕಳಿಂದ ಹೆಚ್ಚಿನ ಅಪಘಾತಗಳು ನಡೆಯುತ್ತಿರುವ ಘಟನೆಗಳು ವರದಿಯಾಗುತ್ತಲೇ ಇವೆ. ಆದರೂ ಪಾಲಕರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಮಹಿಳೆ ಹಾಗೂ ಅವರ ಮಗಳು ಕ್ಲಿನಿಕ್ ನಿಂದ ಹಿಂತಿರುಗುತ್ತಿದ್ದಾಗ ಅವರ ಸ್ಕೂಟರ್ ಗೆ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದಿದೆ. ಕಾರು ಚಲಾಯಿಸುತ್ತಿದ್ದ ಹುಡುಗ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಆತ ಕಾರನ್ನು 100 ಕಿಮೀ ವೇಗದಲ್ಲಿ ಚಲಾಯಿಸುತ್ತಿದ್ದ ಎನ್ನಲಾಗಿದೆ.
ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಕೂಡ ಆತ ಡಿಕ್ಕಿ ಹೊಡೆಸಿದ್ದಾನೆ. ಇದಕ್ಕೂ ಮುನ್ನ ಕಾರು, ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಅಧಿಕಾರಿಗಳಿಗೆ ಹೇಳಿದ್ದಾರೆ. ಆರೋಪಿ ಬಾಲಕನಿಗೆ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ ಮತ್ತು ಆತ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಸ್ಟಂಟ್ ಮಾಡಲು ಮುಂದಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಬಾಲಕನ ತಂದೆಯನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಘಾತದ ವೇಳೆ ಬಾಲಕನ ಮೂವರು ಸ್ನೇಹಿತರು ಕಾರಿನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ರಾಪ್ತ ಚಾಲಕನನ್ನು ಅವನ ತಂದೆಯೊಂದಿಗೆ ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.