ಪ್ಯಾರಿಸ್ ಒಲಿಂಪಿಕ್ಸ್ ನ ಶೂಟಿಂಗ್ ನಲ್ಲಿ ಬೆಳ್ಳಿ ಗೆದ್ದ 51 ವರ್ಷದ ವ್ಯಕ್ತಿ ಈಗ ಇಡೀ ಜಗತ್ತಿನ ಟ್ರೆಂಡ್ ಆಗಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಈವೆಂಟ್ ನಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಟರ್ಕಿ ದೇಶದ ಯೂಸುಫ್ ಡಿಕೇಚ್ ಈಗ ಎಲ್ಲರ ಆಕರ್ಷಣೀಯವಾಗಿದ್ದಾರೆ.
ಪ್ರತಿಯೊಬ್ಬ ಕ್ರೀಡಾಪಟು ಕಣಕ್ಕೆ ಇಳಿಯುತ್ತಿದ್ದಾಗ ಅದಕ್ಕೆ ಸೂಕ್ತವಾದ ಉಡುಗೆ ತೊಡುವುದು ಕಾಮನ. ಶೂಟಿಂಗ್ ವಿಭಾಗಕ್ಕೂ ಅದಕ್ಕೆ ತಕ್ಕದಾದ ವಸ್ತ್ರ ವಿನ್ಯಾಸ ಇದೆ. ಶೂಟಿಂಗ್ ಗಾಗಿಯೇ ವಿನ್ಯಾಸಗೊಳಿಸಿರುವ ರಕ್ಷಾ ಕವಚದಂತಹ ಜಾಕೆಟ್, ಅತ್ಯಾಧುನಿಕ ಕನ್ನಡಕ, ಜೊತೆಗೆ ಹೊರಗಿನ ಶಬ್ದ ಕೇಳಿಸದಂತೆ ಇಯರ್ ಡಿಫೆಂಡರ್ ಗಳನ್ನೂ ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ. ಆದರೆ, ಯೂಸುಫ್ ಡಿಕೇಚ್ ವಿಷಯದಲ್ಲಿ ಮಾತ್ರ ಇದೆಲ್ಲ ಸಂಪೂರ್ಣ ವಿಭಿನ್ನ.
10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಈವೆಂಟ್ ನಲ್ಲಿ ತಮ್ಮ ಜೋಡಿಯಾಗಿದ್ದ ಶೆವ್ವಾಲ್ ಇಲೈಡಾ ತರ್ಹಾನ್ ಮೇಲೆ ಹೇಳಿದಂತೆ ಶೂಟಿಂಗಾಗಿ ಬೇಕಾದ ಎಲ್ಲ ಉಪಕರಣಗಳನ್ನು ಧರಿಸಿ ಸ್ಪರ್ಧೆಗಿಳಿದಿದ್ದರೆ ಜೋಸೆಫ್ ಡಿಕೇಚ್ ಮಾತ್ರ ಟರ್ಕಿ ದೇಶದ ಹೆಸರಿರುವ ಒಂದು ಟಿ ಶರ್ಟ್ ಹಾಗೂ ಸರಳ ಕನ್ನಡಕ ಹಾಕಿಕೊಂಡೇ ಕಣಕ್ಕೆ ಇಳಿದಿದ್ದರು. ಅಲ್ಲದೇ, ಇನ್ನಿತರ ಶೂಟರ್ ಗಳಂತೆ ಇನ್ನೊಂದು ಕಣ್ಣನ್ನೂ ಸಹ ಅವರು ಮುಚ್ಚಿರಲಿಲ್ಲ. ಒಂದು ಕೈಯನ್ನು ಜೇಬಿಗೆ ಹಾಕಿಕೊಂಡು ಬೆಳ್ಳಿ ಪದಕಕ್ಕೆ ಗುರಿ ಇಟ್ಟಿದ್ದಾರೆ.
ಶೂಟಿಂಗ್ ಸ್ಪರ್ಧೆಯಲ್ಲಿ ಒಲಿಂಪಿಕ್ಸ್ ಇತಿಹಾಸದಲ್ಲಿ ಟರ್ಕಿ ದೇಶಕ್ಕೆ ಇದು ಮೊದಲ ಪದಕವಾಗಿದೆ. ಆದರೆ ಈ ಪದಕಕ್ಕಿಂತ ಹೆಚ್ಚಾಗಿ ಯೂಸುಫ್ ಡಿಕೇಚ್ ತಮ್ಮ ಸ್ಟೈಲ್ ನಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ. ಡಿಕೇಚ್ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಡಿಕೇಚ್ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಅವರು 2008 ರಿಂದ ಪ್ರತಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದಾರೆ. ಇದೇ ಮೊದಲ ಬಾರಿಗೆ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಪಿಸ್ತೂಲ್ ಸ್ಪರ್ಧೆಗಳ ಹಲವು ವಿಭಾಗಗಳಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ. ಈಗ ಇವರ ಸ್ಟೈಲ್ ಹಾಗೂ ಸರಳತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.