ಕಲಬುರಗಿ: ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಾಗಿ ನದಿಗೆ ಹಾರಿದ್ದ ಮಹಿಳೆಯನ್ನು ರಕ್ಷಿಸಲು ಹೋಗಿ ಇಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.
ಭೀಮಾ ನದಿಗೆ (Bhima River) ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು (Woman) ಕಾಪಾಡಲು ಹೋಗಿ ಇಬ್ಬರು ನೀರು ಪಾಲಾಗಿದ್ದಾರೆ. ಈ ಘಟನೆ ಕಲಬುರಗಿಯ (Kalaburagi) ಆಲಮೇಲ ತಾಲೂಕಿನ ದೇವಣಗಾಂವ್ ಹತ್ತಿರದ ಅಫಜಲಪುರ-ದೇವಣಗಾಂವ್ ಬ್ರೀಡ್ಜ್ ಬಳಿ ನಡೆದಿದೆ.
ಇಲ್ಲಿ ಪತ್ನಿಯನ್ನು ಕಾಪಾಡಲು ಹೋಗಿ ಆತನ ಪತಿ ಹಾಗೂ ಸಂಬಂಧಿ ಸಾವನ್ನಪ್ಪಿದ್ದಾರೆ. ಪತಿ ಶಿವು ಹಾಗೂ ಸಂಬಂಧಿಕ ರಾಜು ಸಾವನ್ನಪ್ಪಿದ ದುರ್ದೈವಿಗಳು. ಶಿವು ಹಾಗೂ ಪತ್ನಿ ಲಕ್ಷ್ಮೀ ಮಧ್ಯೆ ಆಗಾಗ ಕೌಟುಂಬಿಕ ಕಲಹ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಕಲಹಕ್ಕೆ ಬೇಸತ್ತ ಲಕ್ಷ್ಮೀ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಲಕ್ಷ್ಮೀ ಪ್ರಾಣ ಉಳಿಸಲು ಪತಿ ಶಿವು ಹಾಗೂ ಸಂಬಂಧಿ ರಾಜು ನದಿಗೆ ಹಾರಿದ್ದಾರೆ.
ಕೂಡಲೇ ಮೀನುಗಾರರು ಲಕ್ಷ್ಮೀಯನ್ನು ಕಾಪಾಡಿದ್ದಾರೆ. ಆದರೆ, ಲಕ್ಷ್ಮಿ ಪತಿ ಶಿವು ಮತ್ತು ಆತನ ಸಂಬಂಧಿ ಮಾತ್ರ ನದಿಯ ಪಾಲಾಗಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆಯ ನಂತರ ಇಬ್ಬರ ಮೃತದೇಹ ಪತ್ತೆ ಹಚ್ಚಿದ್ದಾರೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.