ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಮಹಿಳಾ ಶೂಟರ್ ಮನು ಭಾಕರ್ ಬ್ಯಾಕ್ ಟು ಬ್ಯಾಕ್ ಪದಕ ಗಳಿಸಿ ದಾಖಲೆ ನಿರ್ಮಿಸಿದ್ದಾರೆ.
ಮನು ಭಾಕರ್ ಒಂದೇ ಒಲಿಂಪಿಕ್ಸ್ ನಲ್ಲಿ 2 ಪದಕ ಗೆದ್ದ ಮೊದಲ ಭಾರತೀಯ ಎಂಬ ದಾಖಲೆ ನಿರ್ಮಿಸಿದ್ದಾರೆ. ಮನು 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದರು. ಈಗ ಅವರು ಸರಬ್ಜೋತ್ ಸಿಂಗ್ ಅವರೊಂದಿಗೆ ಟೀಮ್ ಈವೆಂಟ್ ನಲ್ಲಿ ಮತ್ತೊಂದು ಕಂಚಿನ ಪದಕ ಗೆದ್ದಿದ್ದಾರೆ. ಈ ಸಾಧನೆಗೆ ಇಡೀ ದೇಶವೇ ಹಾರೈಸುತ್ತಿದೆ. ಈಗ ಮನು ಭಾಕರ್ ಮುಂದೆ ಮತ್ತೊಂದು ಪದಕ ಗೆಲ್ಲುವ ಅವಕಾಶ ಇದೆ. ಅದು ಕೂಡ ಈಡೇರಲಿ ಎಂದು ಇಡೀ ಭಾರತ ಹಾರೈಸುತ್ತಿದೆ ಹಾಗೂ ದೇವರಲ್ಲಿ ಪ್ರಾರ್ಥಿಸುತ್ತಿದೆ.
ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್ಗೆ 3 ಸ್ಪರ್ಧೆಗಳಲ್ಲಿ ಅರ್ಹತೆ ಪಡೆದಿದ್ದರು. ಈಗ ಅವರು ಆಗಸ್ಟ್ 2 ರಂದು 25 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ನಲ್ಲಿ ಪದಕಕ್ಕಾಗಿ ಸೆಣಸಾಟ ನಡೆಸಲಿದ್ದಾರೆ. ಈ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಒಂದು ವೇಳೆ ಮತ್ತೊಂದು ಪದಕ ಗೆದ್ದರೆ, ಹೊಸ ಇತಿಹಾಸ ನಿರ್ಮಿಸಲಿದ್ದಾರೆ.
ಮನು ಭಾಕರ್ ಜುಲೈ 28 ರಂದು ತಮ್ಮ ಮೊದಲ ಪದಕ ಗೆದ್ದಿದ್ದರು. ಈ ಗೆಲುವಿನೊಂದಿಗೆ ಭಾರತದ ಪದಕದ ಖಾತೆಯನ್ನೂ ತೆರೆದಿದ್ದರು. ಈ ಮೂಲಕ ಮನು ಭಾಕರ್ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಲ್ಲದೇ, ಮನು 10 ಮೀಟರ್ ಏರ್ ಪಿಸ್ತೂಲ್ ನ ಟೀಮ್ ಈವೆಂಟ್ ನಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಕಂಚಿನ ಪದಕ್ಕೆ ಕೊರಳ್ಳೊಡಿದ್ದಾರೆ. ಈ ಪದಕ ಗೆಲ್ಲುವ ಮೂಲಕ ಮನು ಒಲಿಂಪಿಕ್ಸ್‌ನ ಒಂದೇ ಆವೃತ್ತಿಯಲ್ಲಿ 2 ಪದಕ ಗೆದ್ದ ಭಾರತದ ಮೊದಲ ಸ್ಪರ್ಧಿ ಎಂಬ ದಾಖಲೆ ನಿರ್ಮಿಸಿದ್ದಾರೆ. ಹಿಂದೆ ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಒಲಿಂಪಿಕ್ಸ್ ನಲ್ಲಿ ಎರಡು ಪದಕ ಗೆದ್ದ ಸಾಧನೆ ಮಾಡಿದ್ದರು. ಆದರೆ ಅವರು ಒಂದೇ ಕೂಟದಲ್ಲಿ ಗೆದ್ದಿಲ್ಲ. ಬೇರೆ ಬೇರೆ ಕೂಟದಲ್ಲಿ ಗೆದ್ದಿದ್ದಾರೆ. ಸುಶೀಲ್ ಕುಮಾರ್ 2008ರಲ್ಲಿ ಕಂಚಿನ ಪದಕ ಹಾಗೂ 2012ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಪಿವಿ ಸಿಂಧು 2016ರಲ್ಲಿ ಬೆಳ್ಳಿ ಹಾಗೂ 2021ರಲ್ಲಿ ಕಂಚಿನ ಪದಕ ಗೆದ್ದಿದ್ದರು. ಈಗ ಮನು ಭಾಕರ್ ಒಂದೇ ಕೂಟದಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.