ಭಾರತ ತಂಡ ಟೀಂ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಸರಣಿ ಗೆದ್ದಿದೆ. ಈ ಟೂರ್ನಿಯಲ್ಲಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal)ದಾಖಲೆಯೊಂದನ್ನು ಮಾಡಿದ್ದಾರೆ.
ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. 15 ಎಸೆತಗಳನ್ನು ಎದುರಿಸಿದ್ದ ಜೈಸ್ವಾಲ್ 2 ಭರ್ಜರಿ ಸಿಕ್ಸರ್ ಹಾಗೂ 3 ಫೋರ್ ಗಳೊಂದಿಗೆ 30 ರನ್ ಗಳಿಸಿ ಔಟ್ ಆದರು. ಈ ಮೂವತ್ತು ರನ್ ಗಳೊಂದಿಗೆ ಯಶಸ್ವಿ 2024 ರಲ್ಲಿ ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.
2024 ರಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್ನಲ್ಲಿ ಒಟ್ಟು 18 ಇನಿಂಗ್ಸ್ ಆಡಿರುವ ಯಶಸ್ವಿ ಜೈಸ್ವಾಲ್ 1082 ಎಸೆತಗಳನ್ನು ಎದುರಿಸಿದ್ದಾರೆ. ಈ ಸಂದರ್ಭದಲ್ಲಿ 2 ಭರ್ಜರಿ ಶತಕ ಹಾಗೂ 5 ಅರ್ಧಶತಕಗಳೊಂದಿಗೆ ಒಟ್ಟು 1023 ರನ್ ಗಳಿಸಿದ್ದಾರೆ. ಈ ಮೂಲಕ ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಾವಿರ ರನ್ ಪೂರೈಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಶ್ರೀಲಂಕಾದ ಆರಂಭಿಕ ಆಟಗಾರ ಕುಸಾಲ್ ಮೆಂಡಿಸ್. ಈ ವರ್ಷ 26 ಪಂದ್ಯಗಳಲ್ಲಿ 28 ಇನಿಂಗ್ಸ್ ಆಡಿರುವ ಮೆಂಡಿಸ್ 901 ಎಸೆತಗಳಲ್ಲಿ 888 ರನ್ ಕಲೆಹಾಕಿದ್ದಾರೆ. ಈ ಮೂಲಕ 2024ರ ರನ್ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
2024 ರಲ್ಲಿ 100ಕ್ಕೂ ಅಧಿಕ ಫೋರ್ ಗಳನ್ನು ಬಾರಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಯಶಸ್ವಿ ಜೈಸ್ವಾಲ್ ಪಾತ್ರರಾಗಿದ್ದಾರೆ. 18 ಇನಿಂಗ್ಸ್ ಗಳಲ್ಲಿ ಬ್ಯಾಟ್ ಬೀಸಿರುವ ಜೈಸ್ವಾಲ್ 42 ಸಿಕ್ಸ್ ಹಾಗೂ 104 ಫೋರ್ ಗಳನ್ನು ಗಳಿಸಿದ್ದಾರೆ. ಈ ಮೂಲಕ ಬೌಂಡರಿಗಳ ಪಟ್ಟಿಯಲ್ಲಿಯೂ ಅಗ್ರ ಸ್ಥಾನದಲ್ಲಿದ್ದಾರೆ.