ಹರಾರೆ: ಸಂಜು ಸ್ಯಾಮ್ಸನ್ (Sanju Samson) ಅವರ ಭರ್ಜರಿ ಬ್ಯಾಟಿಂಗ್ ಹಾಗೂ ಶಿವಂ ದುಬೆ ಆಲ್ ರೌಂಡ್ ಆಟದ ಪರಿಣಾಮ ಭಾರತ ತಂಡವು ಜಿಂಬಾಬ್ವೆ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಮುಕೇಶ್ ಕುಮಾರ್ ಮಾರಕ ಬೌಲಿಂಗ್ ದಾಳಿಗೆ ನಲುಗಿರುವ ಜಿಂಬಾಬ್ವೆ ವಿರುದ್ಧ ಟಿ20 ಸರಣಿಯ 5ನೇ ಪಂದ್ಯದಲ್ಲೂ 42 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯನ್ನು 4-1ರಲ್ಲಿ ಗೆಲುವು ಸಾಧಿಸಿದೆ.
ಆರಂಭಿಕ ಪಂದ್ಯದಲ್ಲಿ ಅತ್ಯಲ್ಪ ಮೊತ್ತವಿದ್ದರೂ ಅಚ್ಚರಿ ಎಂಬಂತೆ ಭಾರತ ತಂಡ ಸೋಲು ಕಂಡಿತ್ತು. ಆನಂತರ ಸತತ ನಾಲ್ಕೂ ಪಂದ್ಯಗಳನ್ನು ಭಾರತ ತಂಡ ಗೆದ್ದು ಬೀಗಿದೆ. ತನ್ನ ನಾಯಕತ್ವದಲ್ಲಿ ನಡೆದ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲೇ ಗೆಲುವು ಸಾಧಿಸುವ ಮೂಲಕ ಶುಭಮನ್ ಗಿಲ್ (Shubman Gill) ನಾಯಕತ್ವದ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಭಾನುವಾರ ನಡೆದ ಕೊನೆಯ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 6 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿತ್ತು. 168 ರನ್ ಸವಾಲಿನ ಗುರಿ ಬೆನ್ನಟ್ಟಿದ ಜಿಂಬಾಬ್ವೆ (Zimbabwe), ಭಾರತ ತಂಡದ ಮಾರಕ ಬೌಲಿಂಗ್ ಗೆ ತತ್ತರಿಸಿ 18.3 ಓವರ್ ಗಳಲ್ಲಿ 125 ರನ್ ಗಳಿಗೆ ಸರ್ವಪತನ ಕಂಡು ಸೋಲಿನ ರುಚಿ ಅನುಭವಿಸಿತು.
ಮೊದಲ ಐದು ಓವರ್‌ಗಳಲ್ಲೇ 40 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಕ್ರೀಸ್‌ನಲ್ಲಿ ಭದ್ರವಾಗಿ ಕ್ರೀಸ್‌ನಲ್ಲಿ ನೆಲೆಯೂರಿದ ಸಂಜು ಸ್ಯಾಮ್ಸನ್ ಹಾಗೂ ರಿಯಾನ್ ಪರಾಗ್ ಜೋಡಿ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾಯಿತು. 56 ಎಸೆತಗಳಲ್ಲಿ ಈ ಜೋಡಿ 4ನೇ ವಿಕೆಟ್ ಗೆ 65 ರನ್ ಗಳಿಸಿತ್ತು. ಈ ವೇಳೆ ಸಿಕ್ಸರ್ ಬಾರಿಸಲು ಮುಂದಾದ ರಿಯಾನ್ ಪರಾಗ್ ಕ್ಯಾಚ್ ನೀಡಿ ಔಟಾದರು. ಆಗ ಕ್ರೀಸ್‌ಗಿಳಿದ ಶಿವಂ ದುಬೆ (Shivam Dube) ಆರಂಭದಿಂದಲೇ ಸಿಕ್ಸರ್, ಬೌಂಡರಿ ಅಬ್ಬರಿಸಲು ಶುರು ಮಾಡಿದರು. ಇದರಿಂದ ಭಾರತ ತಂಡ 160 ರನ್ ಗಳ ಗಡಿ ದಾಟಿತು.
ಸಂಜು ಸ್ಯಾಮ್ಸನ್ 45 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ನೊಂದಿಗೆ 58 ರನ್ ಚಚ್ಚಿದರು. ಈ ವೇಳೆ ಸಂಜು ಸ್ಯಾಮ್ಸನ್ ಬಾರಿಸಿದ ಸಿಕ್ಸರ್‌ವೊಂದು 110 ಮೀಟರ್ ಸಾಗಿತು. ಶಿವಂ ದುಬೆ 28 ರನ್ (12 ಎಸೆತ, 2 ಸಿಕ್ಸರ್, 2 ಬೌಂಡರಿ), ರಿಯಾನ್ ಪರಾಗ್ 22 ರನ್, ಯಶಸ್ವಿ ಜೈಸ್ವಾಲ್ 12 ರನ್, ಶುಭಮನ್ ಗಿಲ್ 13 ರನ್, ಅಭಿಷೇಕ್ ಶರ್ಮಾ 14 ರನ್, ರಿಂಕು ಸಿಂಗ್ 11 ರನ್, ವಾಷಿಂಗ್ಟನ್ 10 ರನ್ ಗಳಿಸಿದರು.
ಗುರಿ ಬೆನ್ನಟ್ಟಿದ ಜಿಂಬಾಬ್ವೆ 15 ರನ್ಗೆ 2 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಸಿಲುಕಿತ್ತು. ಡಿಯೋನ್ ಮೈರ್ಸ್ 34 ರನ್ ಗಳಿಸಿ ತಂಡಕ್ಕೆ ಆಧಾರವಾದರು. ಕೊನೆಯಲ್ಲಿ ಫರಾಜ್ ಅಕ್ರಮ್ 27 ರನ್ ಗಳಿಸಿದರು. ಮರುಮಣಿ 27 ರನ್ ಗಳಿಸಿದರು. ನಂತರ ಯಾರೂ ಸರಿಯಾಗ ಆಡಲಿಲ್ಲ. ಹೀಗಾಗಿ ತಂಡ ಸೋಲನ್ನು ಒಪ್ಪಿಕೊಂಡಿತು. ಭಾರತ ಪರ ಮುಕೇಶ್ ಕುಮಾರ್ 4, ಶಿವಂ ದುಬೆ 2, ತುಷಾರ್ ದೇಶ್‌ಪಾಂಡೆ, ವಾಷಿಂಗ್ಟನ್ ಸುಂದರ್, ಅಭಿಷೇಕ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.


















