ನವದೆಹಲಿ : ಕೇಂದ್ರ ಸಂಪುಟದಲ್ಲಿ ಉಕ್ಕು, ಭಾರೀ ಕೈಗಾರಿಕೆಯ ಸಚಿವರಾಗಿ ಕಾರ್ಯಭಾರ ಆರಂಭಿಸಿರುವ ಎಚ್.ಡಿ.ಕುಮಾರಸ್ವಾಮಿ, ಅಲ್ಪ ಕಾಲದಲ್ಲಿಯೇ ಪ್ರಧಾನಿ ಮನ ಗೆಲ್ಲಲು ಯಶಸ್ವಿಯಾದಂತಿದೆ. ಏಕೆಂದರೆ, ಪ್ರಧಾನಿ ಎಲ್ಲ ಸಚಿವರಿಗಿಂತ ಕುಮಾರಣ್ಣನ ಮೇಲೆ ಹೆಚ್ಚು ಒಲವು ತೋರುತ್ತಿದ್ದಾರೆ.
ಈಗ ಪ್ರಧಾನಿ ಮೋದಿ ಅವರು ಅವರು ಕುಮಾರಸ್ವಾಮಿಗೆ ಈಗಿರುವ ಜವಾಬ್ದಾರಿಯೊಂದಿಗೆ ಮತ್ತೊಂದು ಕಾರ್ಯಾಭಾರವನ್ನು ಹೆಗಲಿಗೆ ಹಾಕಿದ್ದಾರೆ. ಹಣಕಾಸು ವಿಚಾರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಮಿತಿಗೆ ಅವರನ್ನು ಸದಸ್ಯರನ್ನಾಗಿ ಮಾಡಲಾಗಿದೆ.

ಎರಡು ಸ್ಥಾನ ಗೆದ್ದಿದ್ದರೂ ಮೋದಿ ಮತ್ತು ಅಮಿತ್ ಶಾ ಅವರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿರುವ ಕುಮಾರಸ್ವಾಮಿ ಸಂಪುಟ ಆರ್ಥಿಕ ವ್ಯವಹಾರಗಳ ಸಮಿತಿಯಲ್ಲಿ ( Cabinet Committee on Economic Affairs ) ಸದಸ್ಯರಾಗಿ ಸೇರ್ಪಡೆಯಾಗಿದ್ದಾರೆ. ಈ ಸಮಿತಿಯಲ್ಲಿ ಕೆಲವೇ ಕೆಲವು ಹಿರಿಯ ಸಚಿವರಿದ್ದು, ಅವರ ಪೈಕಿ ಕುಮಾರಣ್ಣ ಕೂಡ ಇರುವುದು ವಿಶೇಷ. ಇದು ಕನ್ನಡಿಗರಿಗೆ ಸಂತಸ ನೀಡುವ ಸುದ್ದಿಯಾಗಿದೆ.
ಈ ಸಮಿತಿಯಲ್ಲಿ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಭೂಸಾರಿಗೆ ಸಚಿವ ನಿತಿನ್ ಗಡ್ಕರಿ, ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಡಾ. ಜೈಶಂಕರ್, ವಾಣಿಜ್ಯ ಸಚಿವ ಪಿಯೂಶ್ ಗೋಯಲ್, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಪಂಚಾಯತ್ ರಾಜ್ ಸಚಿವ ಲಲ್ಲನ್ ಸಿಂಗ್ ಇದ್ದಾರೆ.

ದೇಶದ ಆರ್ಥಿಕ ವಿಚಾರದಲ್ಲಿ ಅತ್ಯಂತ ಮಹತ್ವದ ನಿರ್ಣಯ ತೆಗೆದುಕೊಳ್ಳುವ ಈ ಸಮಿತಿಯ ಹನ್ನೊಂದು ಸದಸ್ಯರಲ್ಲಿ ಬಿಜೆಪಿ ಹೊರತಾಗಿ ಇರುವ ಸದಸ್ಯರೆಂದರೆ ಜೆಡಿಎಸ್ ನಿಂದ ಕುಮಾರಸ್ವಾಮಿ ಹಾಗೂ ಜೆಡಿಯು ನಿಂದ ಲಲ್ಲನ್ ಸಿಂಗ್ ಮಾತ್ರ. ಇದು ಕುಮಾರಣ್ಣಂಗೆ ಮತ್ತಷ್ಟು ಗರಿ ನೀಡಿದಂತಾಗಿದೆ.
ಕೇಂದ್ರ ಸರ್ಕಾರ ಎಂಟು ಸಮಿತಿಗಳನ್ನು ರಚಿಸಿದ್ದು , ಬಹುತೇಕ ಎಲ್ಲಾ ಕಮಿಟಿಗೂ ಪ್ರಧಾನಿ ಮೋದಿಯವರೇ ಅಧ್ಯಕ್ಷರು. ರಾಜ್ಯದಿಂದ ಪ್ರಲ್ಹಾದ ಜೋಶಿ ಮತ್ತು ಕುಮಾರಸ್ವಾಮಿ ಈ ಎಂಟು ಸಮಿತಿಗಳಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಬಿಜೆಪಿಯ ಪ್ರಹ್ಲಾದ್ ಜೋಶಿಗಿಂತಲೂ ಕುಮಾರಣ್ಣ ಸಂಪುಟದಲ್ಲಿ ಹೆಚ್ಚು ಜವಾಬ್ದಾರಿಗಳನ್ನು ಹೊತ್ತಿರುವುದು ಅವರ ಆತ್ಮಸ್ಥೈರ್ಯಕ್ಕೆ ಬಲ ನೀಡಿದಂತಾಗಿದೆ.
ಸಂಪುಟ ಬಂಡವಾಳ ಮತ್ತು ಪ್ರಗತಿ ಸಮಿತಿಯಲ್ಲಿ ಪ್ರಲ್ಹಾದ ಜೋಶಿ ಸ್ಥಾನ ಪಡೆದಿದ್ದಾರೆ. ಸಂಪುಟ ನೇಮಕಾತಿ ಸಮಿತಿಯಲ್ಲಿ ಮೋದಿ ಮತ್ತು ಅಮಿತ್ ಶಾ ಇಬ್ಬರೇ ಸದಸ್ಯರಿದ್ದಾರೆ. ಆರ್ಥಿಕ ವ್ಯವಹಾರಗಳ ಸಮಿತಿಯಲ್ಲಿ ಕುಮಾರಸ್ವಾಮಿ ಸದಸ್ಯರಾಗಿರುವುದು ಅವರ ರಾಜಕೀಯ ಜೀವನದ ಬದಲಾದ ಸನ್ನಿವೇಶದ ಪ್ರಮುಖ ಹುದ್ದೆಗಳಲ್ಲೊಂದು ಎಂದೇ ಬಿಂಬಿಸಬಹುದು.
ಜೆಡಿಎಸ್, ಜೆಡಿಯು ಪಕ್ಷದಂತೆಯೇ, ತೆಲುಗುದೇಶಂ ಆರ್ ಎಲ್ ಡಿ, ಎಚ್ಎಎಂ ಪಕ್ಷದ ಸಂಸದರನ್ನೂ ಸಮಿತಿಯ ಸದಸ್ಯರನ್ನಾಗಿ ಮಾಡುವ ಮೂಲಕ, ಮೈತ್ರಿಕೂಟದಲ್ಲಿ ಸಮತೋಲನ ಕಾಪಾಡಿಕೊಳ್ಳಲಾಗಿದೆ. ಆರ್ಥಿಕ ವ್ಯವಹಾರ ಸಮಿತಿಯಲ್ಲಿ ಕುಮಾರಸ್ವಾಮಿ, ಲಲ್ಲನ್ ಸಿಂಗ್ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಹೊಸದಾಗಿ ಸೇರಿದ್ದಾರೆ.