ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ (India Women vs South Africa Women) ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡ ಭರ್ಜರಿ ಜಯ ಸಾಧಿಸಿದೆ.
ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ಭಾರತ ತಂಡ 4 ರನ್ ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಕ್ಕೆ ಪಡೆದಿದೆ.
ಕೊನೆಯವರೆಗೂ ಗೆಲುವಿಗಾಗಿ ಭಾರೀ ಹೋರಾಟ ನಡೆಸಿದ ಆಫ್ರಿಕಾ ತಂಡ ವಿರೋಚಿತ ಸೋಲು ಕಂಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ನಾಯಕಿ ಹರ್ಮನ್ಪ್ರೀತ್ ಕೌರ್ ಹಾಗೂ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಅವರ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ದಾಖಲೆಯ 325 ರನ್ ಗಳಿಸಿತ್ತು.


ಈ ಕಠಿಣ ಸವಾಲು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಕೂಡ ಭರ್ಜರಿ ಹೋರಾಟ ನಡೆಸಿತು. ಕೊನೆಗೂ ಭಾರತ ತಂಡ ಈ ಹೋರಾಟದಲ್ಲಿ ಜಯ ಸಾಧಿಸಿತು. ಆಫ್ರಿಕಾ ತಂಡಕ್ಕೆ 50 ಓವರ್ಗಳಲ್ಲಿ 321 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಅಲ್ಲದೇ, 6 ವಿಕೆಟ್ ಕಳೆದುಕೊಂಡಿತು. ಆಫ್ರಿಕಾ ತಂಡದ ಪರ ಕೂಡ ಇಬ್ಬರು ಆಟಗಾರರು ಶತಕ ಸಿಡಿಸಿ ಮಿಂಚಿದರು. ನಾಯಕಿ ಲಾರಾ ವೊಲ್ವಾರ್ಡ್ಟ್ ಅಜೇಯ 135 ರನ್ ಹಾಗೂ ಮರಿಜಾನ್ನೆ ಕಪ್ 114 ರನ್ ಗಳಿಸಿ ಮಿಂಚಿದರು. ಆದರೂ ತಂಡವನ್ನು ಜಯದ ದಡಕ್ಕೆ ಸೇರಿಸಲು ಆಗಲಿಲ್ಲ.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ಸ್ಮೃತಿ ಮಂಧಾನಾ ಹಾಗೂ ನಾಯಕಿ ಕೌರ್ ಅವರ ಉತ್ತಮ ಬ್ಯಾಟಿಂಗ್ ನಿಂದಾಗಿ 3 ವಿಕೆಟ್ ಕಳೆದುಕೊಂಡು 325 ರನ್ ಗಳಿಸಿತ್ತು. ಭಾರತ ಪರ ಕೌರ್ ಹಾಗೂ ಮಂಧಾನ ಶತಕ ಸಿಡಿಸಿ ಮಿಂಚಿದ್ದರು.