ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದಾರೆ.
ರಾಜ್ಯದಲ್ಲಿ ಭಾನುವಾರ ಹಾಗೂ ಸೋಮವಾರ ಮತ್ತೆ ಪ್ರವಾಸ ಮಾಡಲಿದ್ದಾರೆ. ರಾಜ್ಯದಲ್ಲಿ ಒಟ್ಟು 2 ದಿನಗಳ ಕಾಲ ಪ್ರಧಾನಿ ಮೋದಿ ಮತಬೇಟೆ ನಡೆಸಲಿದ್ದಾರೆ. ಪ್ರಧಾನಿ ಎರಡು ದಿನಗಳ ಪ್ರವಾಸದಲ್ಲಿ ಒಟ್ಟು ಐದು ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈಗಾಗಲೇ ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕದ 14 ಜಿಲ್ಲೆಗಳಲ್ಲಿ ಮತದಾನ ನಡೆದಿದೆ. ಹೀಗಾಗಿ ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಮತದಾನ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಕರ್ನಾಟಕದತ್ತ ಮುಖ ಮಾಡಿದ್ದಾರೆ. ಎರಡು ದಿನಗಳಲ್ಲಿ ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಮತಯಾಚನೆ ಮಾಡಲಿದ್ದಾರೆ.
ಭಾನುವಾರ ದಾವಣಗೆರೆ, ಉತ್ತರ ಕನ್ನಡ ಮತ್ತು ಬೆಳಗಾವಿಯಲ್ಲಿ ಬಹಿರಂಗ ಸಭೆ ಉದ್ಧೇಶಿಸಿ ಮಾತನಾಡಲಿದ್ದಾರೆ. ಅಂದು ಬೆಳಗಾವಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮಾರನೇ ದಿನ ಕಲಬುರಗಿ, ಬಳ್ಳಾರಿ, ರಾಯಚೂರು, ಕೊಪ್ಪಳದಲ್ಲಿ ಆಯೋಜಿಸುವ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಿ ಮೋದಿ ಎರಡು ದಿನಗಳಲ್ಲಿ 6 ರ್ಯಾಲಿ ನಡೆಸಲಿದ್ದಾರೆ. ಏಪ್ರಿಲ್ 28: ಬೆಳಗಾವಿ ಸಮಾವೇಶ (ಬೆಳಗ್ಗೆ 11 ಗಂಟೆಗೆ), ಶಿರಸಿಯಲ್ಲಿ ಸಮಾವೇಶ (ಮಧ್ಯಾಹ್ನ 01 ಗಂಟೆಗೆ), ದಾವಣಗೆರೆ ಸಮಾವೇಶ (ಮಧ್ಯಾಹ್ನ 03 ಗಂಟೆಗೆ), ಹೊಸಪೇಟೆ ಸಮಾವೇಶ (ಸಂಜೆ 5 ಗಂಟೆಗೆ) ನಡೆಯಲಿದೆ. ಏಪ್ರಿಲ್ 29ರಂದು ಬಾಗಲಕೋಟೆ ಸಮಾವೇಶ (ಮಧ್ಯಾಹ್ನ 12.15 ಗಂಟೆಗೆ) ನಡೆಯಲಿದೆ.