ತುಮಕೂರು: ತಾಲೂಕಿನ ಜಕ್ಕೇನಹಳ್ಳಿಯಲ್ಲಿ 33 ವರ್ಷದ ಯುವಕನ ಬರ್ಬರ ಹತ್ಯೆ ನಡೆದಿದ್ದು, ಮುತ್ತುರಾಜ್ ಎಂಬ ಯುವಕನನ್ನು ಸ್ವಂತ ತಾಯಿ ಶಿವಮ್ಮ ಅವರೇ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. 22ರ ರಾತ್ರಿ ಮಲಗಿದ್ದ ವೇಳೆ ಮರದ ಕಟ್ಟಿಗೆಯಿಂದ ಹೊಡೆದು ಮುತ್ತುರಾಜ್ ಅವರನ್ನು ಕೊಲೆ ಮಾಡಲಾಗಿದೆ.
ತನಿಖೆ ಚುರುಕುಗೊಳಿಸಿದ ತುಮಕೂರು ಗ್ರಾಮಾಂತರ ಪೊಲೀಸರು ಕುಟುಂಬಸ್ಥರ ವಿಚಾರಣೆ ನಡೆಸಿದಾಗ ತಾಯಿ ಶಿವಮ್ಮ ಸತ್ಯ ಒಪ್ಪಿಕೊಂಡಿರಲಿಲ್ಲ. ಬಳಿಕ ಪಕ್ಕದ ಮನೆಯ ಸಿಸಿ ಕ್ಯಾಮರಾ ದೃಶ್ಯ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣವೇ ಪೊಲೀಸರು ತಾಯಿ ಶಿವಮ್ಮ ಅವರನ್ನು ವಶಕ್ಕೆ ಪಡೆದಿದ್ದಾರೆ.
ಮೃತ ಮುತ್ತುರಾಜ್ ಗ್ರಾಮದ ಎರಡು ಮಕ್ಕಳ ತಾಯಿಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದು, ಶೀಘ್ರದಲ್ಲೇ ಮದುವೆಯಾಗಲು ಸಿದ್ಧತೆ ನಡೆಸಿದ್ದರು. ಶಿವಮ್ಮ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















