ನವದೆಹಲಿ: ಬಿಸ್ಲೆರಿ ಕಂಪನಿಯ ಪ್ಯಾಕೇಜ್ಡ್ ಕುಡಿಯುವ ನೀರು ಅಸುರಕ್ಷಿತವಾಗಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಘೋಷಿಸಿ, ಕಾನೂನು ಕ್ರಮಕ್ಕೆ ಮುಂದಾಗಿರುವ ಬೆನ್ನಲ್ಲೇ, ಜನಪ್ರಿಯ ಬ್ರ್ಯಾಂಡ್ ಬಿಸ್ಲೆರಿ ತನ್ನ ನೀರು ಕುಡಿಯಲು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದೆ. ಎಫ್ಎಸ್ಎಸ್ಎಐ ವರದಿಯನ್ನು ನಿರಾಕರಿಸಿರುವ ಕಂಪನಿಯು, ಸ್ವತಂತ್ರ ಪ್ರಯೋಗಾಲಯದ ಪರೀಕ್ಷೆಗಳಲ್ಲಿ ನೀರಿನಲ್ಲಿ ಬ್ರೋಮೇಟ್ ಅಂಶ ನಿಗದಿತ ಮಿತಿಯೊಳಗೇ ಇರುವುದು ದೃಢಪಟ್ಟಿದೆ ಎಂದು ಇಂದು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ, ಪ್ರಾಧಿಕಾರದಿಂದ ತಮಗೆ ಯಾವುದೇ ಅಧಿಕೃತ ನೋಟಿಸ್ ಬಂದಿಲ್ಲ ಎಂದೂ ಕಂಪನಿ ಹೇಳಿಕೊಂಡಿದೆ.
2025ರ ಸೆಪ್ಟೆಂಬರ್ನ ಗೋವಾ ಘಟಕದ ಪ್ರಕರಣ
ವಿವಾದಕ್ಕೆ ಕಾರಣವಾಗಿರುವ ಈ ಪ್ರಕರಣವು 2025ರ ಸೆಪ್ಟೆಂಬರ್ನಲ್ಲಿ ಗೋವಾದಲ್ಲಿರುವ ಬಿಸ್ಲೆರಿ ಉತ್ಪಾದನಾ ಘಟಕದಲ್ಲಿ ತಯಾರಾದ ಬ್ಯಾಚ್ಗೆ ಸಂಬಂಧಿಸಿದೆ ಎಂದು ಕಂಪನಿ ವಿವರಿಸಿದೆ. 2025ರ ಸೆಪ್ಟೆಂಬರ್ 30ರಂದು ಎಫ್ಎಸ್ಎಸ್ಎಐ ಅಧಿಕಾರಿಗಳು ಗೋವಾ ಘಟಕದಿಂದ ಆರು ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದರು. ಆರಂಭಿಕ ಪರೀಕ್ಷೆಯಲ್ಲಿ ಐದು ಮಾದರಿಗಳು ಎಲ್ಲಾ ಗುಣಮಟ್ಟದ ಮಾನದಂಡಗಳನ್ನು ಪೂರೈಸಿದ್ದವು. ಆದರೆ, ಆರನೇ ಮಾದರಿಯಲ್ಲಿ ನಿಗದಿತ 10 ಮೈಕ್ರೋಗ್ರಾಂ ಮಿತಿಗೆ ಬದಲಾಗಿ ಪ್ರತಿ ಲೀಟರ್ಗೆ 12 ಮೈಕ್ರೋಗ್ರಾಂ ಬ್ರೋಮೇಟ್ ಅಂಶ ಪತ್ತೆಯಾಗಿತ್ತು. ಇದನ್ನು ಪ್ರಶ್ನಿಸಿ ಬಿಸ್ಲೆರಿ 2025ರ ನವೆಂಬರ್ 22ರಂದು ಮೇಲ್ಮನವಿ ಸಲ್ಲಿಸಿತ್ತು.
ಪರೀಕ್ಷಾ ವರದಿಗಳಲ್ಲಿ ವ್ಯತ್ಯಾಸ, ಸ್ಪಷ್ಟನೆ ಕೋರಿದ ಕಂಪನಿ
ಕಂಪನಿಯ ಮೇಲ್ಮನವಿಯ ನಂತರ ಎಫ್ಎಸ್ಎಸ್ಎಐ ಆ ಮಾದರಿಯನ್ನು ಮರುಪರೀಕ್ಷೆಗಾಗಿ ರೆಫರಲ್ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಅಲ್ಲಿ ಬ್ರೋಮೇಟ್ ಮಟ್ಟ ನಿಗದಿತ ಮಿತಿಯೊಳಗೇ ಇರುವುದು ಕಂಡುಬಂದಿತ್ತಾದರೂ, ‘ಪಾಲಿನ್ಯೂಕ್ಲಿಯರ್ ಆರೋಮ್ಯಾಟಿಕ್ ಹೈಡ್ರೋಕಾರ್ಬನ್ಗಳು’ (ಪಿಎಹೆಚ್) ಇರುವುದಾಗಿ ಪ್ರತ್ಯೇಕವಾಗಿ ಉಲ್ಲೇಖಿಸಲಾಗಿತ್ತು. ಎರಡು ಪರೀಕ್ಷಾ ವರದಿಗಳ ನಡುವಿನ ಈ ವ್ಯತ್ಯಾಸವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದರಿಂದ, ಬಿಸ್ಲೆರಿ ಅದೇ ಮಾದರಿಯನ್ನು ಎಫ್ಎಸ್ಎಸ್ಎಐ ಮಾನ್ಯತೆ ಪಡೆದ ಸ್ವತಂತ್ರ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಈ ಪರೀಕ್ಷೆಯಲ್ಲೂ ಬ್ರೋಮೇಟ್ ಪ್ರಮಾಣ ನಿಗದಿತ ಮಿತಿಯೊಳಗೇ ಇರುವುದು ಸಾಬೀತಾಗಿದೆ ಎಂದು ಕಂಪನಿ ತಿಳಿಸಿದೆ.
ಯಾವುದೇ ನೋಟಿಸ್ ಬಂದಿಲ್ಲ ಎಂದ ಬಿಸ್ಲೆರಿ
ಸ್ವತಂತ್ರ ಪ್ರಯೋಗಾಲಯದ ವರದಿಯನ್ನು 2026ರ ಫೆಬ್ರವರಿ 2ರಂದು ಎಫ್ಎಸ್ಎಸ್ಎಐನ ಪಶ್ಚಿಮ ಪ್ರಾದೇಶಿಕ ಕಚೇರಿಗೆ ಅಧಿಕೃತ ಪತ್ರದ ಮೂಲಕ ಸಲ್ಲಿಸಲಾಗಿತ್ತು. ಆ ಬಳಿಕ ಪ್ರಾಧಿಕಾರದಿಂದ ಯಾವುದೇ ಪತ್ರವ್ಯವಹಾರ ನಡೆದಿಲ್ಲವಾದ್ದರಿಂದ ಪ್ರಕರಣ ಮುಕ್ತಾಯಗೊಂಡಿದೆ ಎಂದು ಭಾವಿಸಲಾಗಿತ್ತು. ಇಂದಿಗೂ ಇಮೇಲ್ ಅಥವಾ ಅಂಚೆ ಮೂಲಕ ಯಾವುದೇ ನೋಟಿಸ್ ಬಂದಿಲ್ಲ ಹಾಗೂ ಎಫ್ಎಸ್ಎಸ್ಎಐ ವೆಬ್ಸೈಟ್ನಲ್ಲೂ ಈ ಕುರಿತ ಮಾಹಿತಿ ಲಭ್ಯವಿಲ್ಲ ಎಂದು ಬಿಸ್ಲೆರಿ ಸ್ಪಷ್ಟಪಡಿಸಿದೆ. 10 ಹಂತಗಳ ಉತ್ಪಾದನಾ ಪ್ರಕ್ರಿಯೆಯಲ್ಲಿ 90ಕ್ಕೂ ಹೆಚ್ಚು ಕಠಿಣ ಗುಣಮಟ್ಟ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಬಿಸ್ಲೆರಿ ನೀರು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಕಂಪನಿ ಭರವಸೆ ನೀಡಿದೆ.
ಕಾನೂನು ಕ್ರಮಕ್ಕೆ ಎಫ್ಎಸ್ಎಸ್ಎಐ ಅನುಮತಿ
ಮತ್ತೊಂದೆಡೆ, 2006ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಪರೀಕ್ಷೆಗೆ ಒಳಪಡಿಸಿದ ನೀರಿನ ಮಾದರಿ ಅಸುರಕ್ಷಿತ ಎಂದು ಪ್ರಯೋಗಾಲಯದ ವರದಿಗಳು ದೃಢಪಡಿಸಿರುವ ಹಿನ್ನೆಲೆಯಲ್ಲಿ, ಬಿಸ್ಲೆರಿ ಇಂಟರ್ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿರುವುದಾಗಿ ಎಫ್ಎಸ್ಎಸ್ಎಐ ತಿಳಿಸಿದೆ. ಆರಂಭಿಕ ಪರೀಕ್ಷೆಯಲ್ಲಿ ಬ್ರೋಮೇಟ್ ಮಿತಿ ಮೀರಿದ್ದರೆ, ರೆಫರಲ್ ಲ್ಯಾಬ್ ಪರೀಕ್ಷೆಯಲ್ಲಿ ಪಿಎಹೆಚ್ ಅಂಶ ಪತ್ತೆಯಾಗಿರುವುದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಪ್ರಾಧಿಕಾರ ಹೇಳಿದೆ. ಸದ್ಯ ಕಂಪನಿಯು ಕಾನೂನು ಮತ್ತು ನಿಯಂತ್ರಕ ಪ್ರಕ್ರಿಯೆಗಳ ಮೂಲಕ ಎಫ್ಎಸ್ಎಸ್ಎಐಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ.


















