ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (RBI) ಈಗ ದೇಶೀಯ ಹಣ ವರ್ಗಾವಣೆ (DMT) ನಿಯಮಗಳನ್ನು ಸರಳಗೊಳಿಸಿ, ಒಂದೇ ಸಮಗ್ರ ಚೌಕಟ್ಟಿನಡಿ ತಂದಿದೆ. ಈ ಹೊಸ ಮಾರ್ಗಸೂಚಿಗಳು ಬ್ಯಾಂಕ್ ಖಾತೆ ಹೊಂದಿರದ ವಲಸೆ ಕಾರ್ಮಿಕರು ಮತ್ತು ದಿನಗೂಲಿ ಕಾರ್ಮಿಕರಿಗೆ ಕುಟುಂಬಕ್ಕೆ ಹಣ ಕಳುಹಿಸಲು ಹೆಚ್ಚು ಅನುಕೂಲ ಕಲ್ಪಿಸುತ್ತವೆ. ಹೊಸ ನಿಯಮಗಳ ಪ್ರಕಾರ, ವಿವಿಧ ವರ್ಗಾವಣೆ ವಿಧಾನಗಳಿಗೆ ನಗದು ಮಿತಿಗಳನ್ನು ನಿಗದಿಪಡಿಸಲಾಗಿದೆ:
ಹೊಸ ನಿಯಮಗಳೇನು?
ಬ್ಯಾಂಕ್ ಶಾಖೆಗಳ ಮೂಲಕ ವರ್ಗಾವಣೆ: ಯಾವುದೇ ಬ್ಯಾಂಕ್ ಶಾಖೆಗೆ ನೇರವಾಗಿ ತೆರಳುವ ಗ್ರಾಹಕರು NEFT ಮೂಲಕ ಗರಿಷ್ಠ 50,000 ರೂ.ವರೆಗೆ ನಗದು ವರ್ಗಾವಣೆ ಮಾಡಬಹುದು.
ಎಟಿಎಂಗಳ ಮೂಲಕ ನಗದು ಠೇವಣಿ ಮಾಡಿ ಖಾತೆಗೆ ಕಳುಹಿಸಲು ಪ್ರತಿ ವಹಿವಾಟಿಗೆ 5,000 ರೂ. ಮಿತಿ ಇದ್ದು, ತಿಂಗಳಿಗೆ ಗರಿಷ್ಠ 25,000 ರೂ. ವರೆಗೆ ಮಾತ್ರ ಕಳುಹಿಸಲು ಅವಕಾಶವಿದೆ.
ಖಾತೆ ಇಲ್ಲದವರಿಗೆ ನಗದು ಪಾವತಿ: ಬ್ಯಾಂಕ್ ಖಾತೆ ಹೊಂದಿರದ ಫಲಾನುಭವಿಗಳು ಎಟಿಎಂ ಅಥವಾ ಬಿಸಿನೆಸ್ ಕರೆಸ್ಪಾಂಡೆಂಟ್ ಮೂಲಕ ಹಣ ಪಡೆಯಲು ಪ್ರತಿ ವಹಿವಾಟಿಗೆ 10,000 ರೂ. ಮಿತಿ ಹಾಗೂ ಫಲಾನುಭವಿಗೆ ತಿಂಗಳಿಗೆ ಗರಿಷ್ಠ 25,000 ರೂ. ಮಿತಿ ನಿಗದಿಪಡಿಸಲಾಗಿದೆ.
ಕಡ್ಡಾಯ ಕೆವೈಸಿ ಮತ್ತು ಭದ್ರತಾ ಕ್ರಮ
ನಗದು ಹಣ ಕಳುಹಿಸುವ ಗ್ರಾಹಕರು ಪರಿಶೀಲಿಸಿದ ಮೊಬೈಲ್ ಸಂಖ್ಯೆ ಹಾಗೂ ಸ್ವಯಂ-ದೃಢೀಕೃತ ಅಧಿಕೃತ ದಾಖಲೆಯನ್ನು ನೀಡುವುದು ಕಡ್ಡಾಯವಾಗಿದೆ. ಪ್ರತಿ ವಹಿವಾಟಿಗೂ ಹೆಚ್ಚುವರಿ ದೃಢೀಕರಣ ಅಗತ್ಯವಿದ್ದು, ಎಲ್ಲ ವಹಿವಾಟುಗಳು ರಿಯಲ್ ಟೈಮ್ ನಲ್ಲಿ ನಡೆಯಬೇಕು ಎಂದು ಆರ್ ಬಿಐ ಸೂಚಿಸಿದೆ. ಕಾರ್ಡ್ ನಿಂದ ಕಾರ್ಡ್ ಗೆ (Card-to-card) ಹಣ ವರ್ಗಾವಣೆಗಳನ್ನು ಈ ನಿಯಮಗಳಿಂದ ಹೊರಗಿಡಲಾಗಿದೆ.



















