ಬೆಂಗಳೂರು: ಭಾರತೀಯ ರೈಲ್ವೆಯು ಆರ್ ಎಸಿ (RAC – Reservation Against Cancellation) ಟಿಕೆಟ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಪ್ರಯಾಣಿಕರಿಂದ ಪೂರ್ಣ ಶುಲ್ಕ ವಸೂಲಿ ಮಾಡಲಾಗುತ್ತಿದ್ದರೂ, ಪೂರ್ಣ ಬರ್ತ್ (Sleeping Berth) ಸಿಗುತ್ತಿಲ್ಲ ಎಂಬ ಸಾರ್ವಜನಿಕ ಹಾಗೂ ಸಂಸದೀಯ ಸಮಿತಿಯ ಆಕ್ಷೇಪಗಳ ಬೆನ್ನಲ್ಲೇ ಹೊಸ ಚಿಂತನೆ ನಡೆಸಲಾಗಿದೆ.
ಪ್ರಸ್ತುತ ನಿಯಮದ ಪ್ರಕಾರ, ಆರ್ ಎಸಿ ಟಿಕೆಟ್ ಹೊಂದಿರುವ ಇಬ್ಬರು ಪ್ರಯಾಣಿಕರು ಒಂದೇ ಸೈಡ್ ಲೋವರ್ ಬರ್ತ್ ಅನ್ನು ಹಂಚಿಕೊಳ್ಳಬೇಕಾಗುತ್ತದೆ. ಆದರೆ, ಪೂರ್ತಿ ಟಿಕೆಟ್ ಹಣ ಪಾವತಿಸಿದರೂ ರಾತ್ರಿಯ ಪ್ರಯಾಣದಲ್ಲಿ ಮಲಗಲು ಪ್ರತ್ಯೇಕ ಸೀಟ್ ಸಿಗದಿರುವುದು ಪ್ರಯಾಣಿಕರಿಗೆ ಅನನುಕೂಲವಾಗಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಮಂಡಳಿಯು ಹೊಸ ಪ್ರಸ್ತಾವನೆಗಳನ್ನು ಪರಿಶೀಲಿಸುತ್ತಿದೆ. ಮತ್ತೊಂದಿಷ್ಟು ಮೂಲಗಳ ಪ್ರಕಾರ, ಆರ್ ಎಸಿ ಪದ್ಧತಿಯನ್ನೇ ರದ್ದುಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ರೈಲ್ವೆಯು ಆರ್ ಎಸಿ ಪ್ರಯಾಣಿಕರಿಗೆ ಪ್ರತ್ಯೇಕವಾದ ಪೂರ್ಣ ಬರ್ತ್ ಒದಗಿಸುವ ಕುರಿತು ಅಥವಾ ಬರ್ತ್ ಹಂಚಿಕೊಳ್ಳುವ ಪ್ರಯಾಣಿಕರಿಗೆ ಟಿಕೆಟ್ ದರದಲ್ಲಿ ವಿನಾಯಿತಿ (ಭಾಗಶಃ ಮರುಪಾವತಿ) ನೀಡುವ ಬಗ್ಗೆಯೂ ಚಿಂತನೆ ನಡೆಸುತ್ತಿದೆ. ಈ ಹಿಂದೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು (PAC) ಪೂರ್ಣ ಬರ್ತ್ ಸಿಗದಿದ್ದರೂ ಪೂರ್ಣ ಶುಲ್ಕ ಪಡೆಯುವುದು ಸರಿಯಲ್ಲ ಎಂದು ಆಕ್ಷೇಪಿಸಿತ್ತು.
ಸದ್ಯಕ್ಕೆ ಇದು ಪರಿಶೀಲನಾ ಹಂತದಲ್ಲಿದ್ದು, ಯಾವುದೇ ಅಧಿಕೃತ ಅಂತಿಮ ನಿರ್ಧಾರ ಪ್ರಕಟವಾಗಿಲ್ಲ. ಈ ನೂತನ ಬದಲಾವಣೆಗಳು ಜಾರಿಗೆ ಬಂದರೆ ದೀರ್ಘ ದೂರದ ರೈಲು ಪ್ರಯಾಣಿಕರಿಗೆ ದೊಡ್ಡ ಮಟ್ಟದ ರಿಲೀಫ್ ಸಿಗಲಿದೆ. ಒಂದೋ ಪ್ರಯಾಣಿಕರಿಗೆ ಪ್ರತ್ಯೇಕ ಸೀಟ್ ಸಿಗಲಿದೆ. ಇಲ್ಲದಿದ್ದರೆ, ಆರ್ ಎಸಿ ಅನ್ವಯ ಕುಳಿತುಕೊಂಡು ಪ್ರಯಾಣಿಸಿದರೆ ಟಿಕೆಟ್ ದರದಲ್ಲಿ ರಿಯಾಯಿತಿ ದೊರೆಯಲಿದೆ.


















