ಬೆಂಗಳೂರು: ಪೆಟ್ರೋಲ್ನಲ್ಲಿ ಹೆಚ್ಚಿನ ಎಥೆನಾಲ್ ಮಿಶ್ರಣ ಮಾಡುತ್ತಿರುವ ಆರೋಪದ ಕುರಿತು ರಾಜ್ಯ ಸರ್ಕಾರ ಪರಿಶೀಲನೆ ನಡೆಸಿದ ವರದಿಯ ಬಗ್ಗೆ ಸಚಿವ ರಿಜ್ವಾನ್ ಅರ್ಷದ್ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ. ಎಥೆನಾಲ್ ಮಿಶ್ರಣ ಕಾರ್ಯಕ್ರಮಕ್ಕೆ ರಾಜ್ಯದ ವಿರೋಧವಿಲ್ಲ, ಆದರೆ ಅತಿಯಾದ ಎಥೆನಾಲ್ ಮಿಶ್ರಣದಿಂದ ವಾಹನಗಳಿಗೆ ಹಾನಿಯಾಗುತ್ತಿದೆ ಮತ್ತು ಮೈಲೇಜ್ ಕುಸಿಯುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಬಂದಿವೆ ಎಂದು ಅವರು ತಿಳಿಸಿದ್ದಾರೆ.
ಸೆಪ್ಟೆಂಬರ್ನಲ್ಲಿ ರಾಜ್ಯದ ವಿವಿಧ ಪೆಟ್ರೋಲ್ ಬಂಕ್ಗಳಿಂದ ಮಾದರಿ ಸಂಗ್ರಹಿಸಿ ಎನ್ ಎಬಿಎಲ್ ಮಾನ್ಯತೆ ಪಡೆದ ಸ್ವತಂತ್ರ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿದಾಗ, 14 ಮಾದರಿಗಳಲ್ಲಿ 11 ಮಾದರಿಗಳು ಶೇಕಡಾ 20 ಕ್ಕಿಂತ ಹೆಚ್ಚು ಎಥೆನಾಲ್ ಹೊಂದಿರುವುದು ಹಾಗೂ ಎಥೆನಾಲ್ ಪ್ರಮಾಣ ಒಂದೇ ಸಮನಾಗಿಲ್ಲದೆ ಶೇಕಡಾ 13.5 ರಿಂದ ಶೇಕಡಾ 31.2 ರವರೆಗೆ ಇರುವುದು ಕಂಡುಬಂದಿದೆ. ಪೆಟ್ರೋಲ್ ಡಿಸ್ಪೆನ್ಸರ್ಗಳ ಪರಿಶೀಲನೆಯನ್ನು 12 ತಿಂಗಳಿಂದ 24 ತಿಂಗಳಿಗೆ ಹೆಚ್ಚಿಸುವ ಕೇಂದ್ರದ ಅಧಿಸೂಚನೆಯನ್ನು ರಾಜ್ಯ ವಿರೋಧಿಸಿದ್ದು, ಶೇಕಡಾ 90ರಷ್ಟು ಬಂಕ್ಗಳ ನಳಿಕೆಗಳಲ್ಲಿ ವ್ಯತ್ಯಾಸ ಪತ್ತೆಯಾಗಿ ಗ್ರಾಹಕರಿಗೆ ಕಡಿಮೆ ಇಂಧನ ಸಿಗುತ್ತಿರುವುದು ಸಾಬೀತಾಗಿದೆ.
ಹೀಗಾಗಿ ಪ್ರತಿ ಪೆಟ್ರೋಲ್ ಬಂಕ್ನಲ್ಲಿ ಮತ್ತು ಗ್ರಾಹಕರಿಗೆ ನೀಡುವ ಬಿಲ್ನಲ್ಲಿ ಎಥೆನಾಲ್ ಶೇಕಡಾವಾರು ಪ್ರಮಾಣವನ್ನು ನಮೂದಿಸಬೇಕು, ವಾಹನಗಳು ಸಂಪೂರ್ಣವಾಗಿ ಹೊಂದಿಕೊಳ್ಳುವವರೆಗೆ ಇ10 ಮತ್ತು ಎಥೆನಾಲ್ ರಹಿತ ಪೆಟ್ರೋಲ್ ಲಭ್ಯವಿರಬೇಕು, NABL ಮಾನ್ಯತೆ ಪಡೆದ ಪ್ರಯೋಗಾಲಯಗಳ ಮೂಲಕ ಸ್ವತಂತ್ರ ಪರೀಕ್ಷಾ ಕೇಂದ್ರ ಸ್ಥಾಪಿಸಬೇಕು ಹಾಗೂ ವಾಹನಗಳು ಹಾನಿಗೊಳಗಾದರೆ ಪರಿಹಾರ ನೀಡಲು ಪ್ರತ್ಯೇಕ ನಿಧಿ ರಚಿಸಬೇಕು ಎಂದು ಸಚಿವ ರಿಜ್ವಾನ್ ಅರ್ಷದ್ ಪತ್ರದ ಮೂಲಕ ಮನವಿ ಮಾಡಿದ್ದಾರೆ.


















