ಬೆಂಗಳೂರು: ಕರಾವಳಿ ಮೂಲಕ ಗೋವಾವನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ವಾಣಿಜ್ಯ ಸಂಚಾರಕ್ಕೆ ಮೊದಲ ದಿನವೇ ಪ್ರಯಾಣಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾನುವಾರದಿಂದ ಆರಂಭವಾದ ಅಧಿಕೃತ ಸಂಚಾರದಲ್ಲಿ ಬಹುತೇಕ ಟಿಕೆಟ್ಗಳು ಮುಂಗಡವಾಗಿ ಕಾಯ್ದಿರಿಸಲ್ಪಟ್ಟು, ರೈಲು ಸಂಪೂರ್ಣ ಭರ್ತಿಯಾಗಿ ಸಂಚರಿಸಿದೆ. ಇದರ ಬೆನ್ನಲ್ಲೇ ಕರಾವಳಿ ಭಾಗದ ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಸಾರ್ವಜನಿಕರ ಒತ್ತಾಯದ ಮೇರೆಗೆ ಗೊಮಟೇಶ್ವರ ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿ ಬದಲಾವಣೆ ನಿರ್ಧಾರವನ್ನು ಕೈಬಿಟ್ಟಿದೆ.
ನಿಗದಿತ ಸಮಯಕ್ಕೆ ವಂದೇ ಭಾರತ್ ಸಂಚಾರ
ಯಶವಂತಪುರದಿಂದ ಮಡಗಾಂವ್ಗೆ (ರೈಲು ಸಂಖ್ಯೆ 26655) ಹಾಗೂ ಮಡಗಾಂವ್ನಿಂದ ಯಶವಂತಪುರಕ್ಕೆ (ರೈಲು ಸಂಖ್ಯೆ 26656) ವಯಾ ಮಂಗಳೂರು ಜಂಕ್ಷನ್ ಮೂಲಕ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ನಿಗದಿತ ವೇಳಾಪಟ್ಟಿಯಂತೆ ಕಾರ್ಯಾಚರಣೆ ನಡೆಸಿದೆ. ಮಾರ್ಗಮಧ್ಯೆ ಕೆಲವೆಡೆ 5-10 ನಿಮಿಷಗಳ ವಿಳಂಬವಾದರೂ, ಮುಂದಿನ ನಿಲ್ದಾಣಗಳನ್ನು ತಲುಪುವಾಗ ನಿಗದಿತ ಸಮಯವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪಶ್ಚಿಮಘಟ್ಟದ ಕಡಗರವಳ್ಳಿ ಬಳಿ ಯಶವಂತಪುರದಿಂದ ಆಗಮಿಸುತ್ತಿದ್ದ ವಂದೇ ಭಾರತ್ ಹಾಗೂ ಮಂಗಳೂರಿನಿಂದ ತೆರಳುತ್ತಿದ್ದ ಮಂಗಳೂರು-ಯಶವಂತಪುರ ವೀಕ್ಲಿ ಎಕ್ಸ್ಪ್ರೆಸ್ ರೈಲುಗಳಿಗೆ ಸುಗಮವಾಗಿ ಕ್ರಾಸಿಂಗ್ ನೀಡಲಾಯಿತು.
ಮಡಗಾಂವ್-ಯಶವಂತಪುರ ಮಾರ್ಗ ಸಂಪೂರ್ಣ ಭರ್ತಿ
ವಾಣಿಜ್ಯ ಸಂಚಾರದ ಮೊದಲ ದಿನವೇ ಮಡಗಾಂವ್ನಿಂದ ಯಶವಂತಪುರಕ್ಕೆ ಸಂಚರಿಸಿದ ವಂದೇ ಭಾರತ್ ರೈಲಿನ ಎಲ್ಲ ಸೀಟುಗಳು ಸಂಪೂರ್ಣ ಭರ್ತಿಯಾಗಿದ್ದವು. ಯಶವಂತಪುರದಿಂದ ಮಡಗಾಂವ್ಗೆ ತೆರಳಿದ ರೈಲಿನಲ್ಲಿಯೂ ಬಹುತೇಕ ಸೀಟುಗಳು ಭರ್ತಿಯಾಗಿದ್ದವು. ರೈಲು ಉಡುಪಿ ನಿಲ್ದಾಣವನ್ನು ತಲುಪಿದಾಗ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ರೈಲ್ವೆ ಯಾತ್ರಿ ಸಮಿತಿ ಮುಖಂಡರು ಪ್ರಯಾಣಿಕರಿಗೆ ಸಿಹಿ ಹಂಚಿ ರೈಲು ಸಂಚಾರವನ್ನು ಸ್ವಾಗತಿಸಿದರು. ಸುಮಾರು 850 ಕಿಲೋಮೀಟರ್ ದೂರವನ್ನು ಕ್ರಮಿಸುವ ಈ ರೈಲು ಹಾಸನ, ಸಕಲೇಶಪುರ, ಮಂಗಳೂರು, ಉಡುಪಿ, ಮುರ್ಡೇಶ್ವರ, ಗೋಕರ್ಣ ಮತ್ತು ಕಾರವಾರದಂತಹ ಪ್ರಮುಖ ಪ್ರವಾಸಿ ಹಾಗೂ ವಾಣಿಜ್ಯ ಕೇಂದ್ರಗಳನ್ನು ರಾಜಧಾನಿಯೊಂದಿಗೆ ಬೆಸೆಯಲಿದೆ.
ಗೊಮಟೇಶ್ವರ ಎಕ್ಸ್ಪ್ರೆಸ್ ಹಳೆಯ ಸಮಯದಲ್ಲೇ ಮುಂದುವರಿಕೆ
ವಂದೇ ಭಾರತ್ ರೈಲಿನ ವೇಳಾಪಟ್ಟಿ ಪ್ರಕಟವಾದ ತಕ್ಷಣವೇ, ಮಂಗಳೂರು-ಬೆಂಗಳೂರು ನಡುವೆ ಪ್ರತಿದಿನ ಸಂಚರಿಸುವ ಜನಪ್ರಿಯ ಗೊಮಟೇಶ್ವರ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16576) ನಿರ್ಗಮನ ಸಮಯವನ್ನು ಬೆಳಗ್ಗೆ 7 ಗಂಟೆಯ ಬದಲು 11 ಗಂಟೆಗೆ ವಿಳಂಬಗೊಳಿಸಲು ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿತ್ತು. ಈ ನಿರ್ಧಾರಕ್ಕೆ ಕರಾವಳಿ ಭಾಗದ ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇತ್ತೀಚೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಂಗಳೂರಿಗೆ ಭೇಟಿ ನೀಡಿದ್ದಾಗ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ರೈಲ್ವೆ ಸಂಘಟನೆಗಳ ಮುಖಂಡರು ಈ ಬಗ್ಗೆ ಆಕ್ಷೇಪ ದಾಖಲಿಸಿದ್ದರು.
ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಹಾಗೂ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಸೇರಿದಂತೆ ಹಲವು ಮುಖಂಡರು ಮನವಿ ಸಲ್ಲಿಸಿ, ಹಳೆಯ ವೇಳಾಪಟ್ಟಿಯನ್ನೇ ಮುಂದುವರಿಸುವಂತೆ ಆಗ್ರಹಿಸಿದ್ದರು. ಸಾರ್ವಜನಿಕರ ಈ ಒತ್ತಾಯವನ್ನು ಪುರಸ್ಕರಿಸಿರುವ ರೈಲ್ವೆ ಇಲಾಖೆಯು, ಗೊಮಟೇಶ್ವರ ಎಕ್ಸ್ಪ್ರೆಸ್ ವೇಳಾಪಟ್ಟಿ ಬದಲಾವಣೆಯನ್ನು ಸದ್ಯಕ್ಕೆ ಕೈಬಿಟ್ಟಿದ್ದು, ಎಂದಿನಂತೆ ಹಳೆಯ ಸಮಯದಲ್ಲೇ ರೈಲು ಕಾರ್ಯಾಚರಣೆ ಮುಂದುವರಿಸಿದೆ.


















