ಬೆಂಗಳೂರು: ಗೌರವಧನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಆಶಾ ಕಾರ್ಯಕರ್ತೆಯರು ನವೆಂಬರ್ 17ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಲಿದ್ದಾರೆ. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಈ ಹೋರಾಟಕ್ಕೆ ಕರೆ ನೀಡಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಕಾರ್ಯಕರ್ತೆಯರು ರಾಜಧಾನಿಗೆ ಆಗಮಿಸಲಿದ್ದಾರೆ. ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಬೇಡಿಕೆಗಳು ಈಡೇರಿಲ್ಲ ಎಂದು ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆ ಎಂದರೆ ಮಾಸಿಕ ಕನಿಷ್ಠ 15 ಸಾವಿರ ರೂಪಾಯಿ ನಿಗದಿತ ಗೌರವಧನ. ಪ್ರಸ್ತುತ ಅವರ ಪಾವತಿ ಬಹುಪಾಲು ಪ್ರೋತ್ಸಾಹಧನ ಆಧಾರಿತವಾಗಿದ್ದು, ಇದರಿಂದ ಅವರಿಗೆ ಯಾವುದೇ ರೀತಿಯ ಆರ್ಥಿಕ ಭದ್ರತೆ ಇಲ್ಲದಂತಾಗಿದೆ. ಕಳೆದ 18 ವರ್ಷಗಳಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತಳಮಟ್ಟದ ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ಆಶಾ ಕಾರ್ಯಕರ್ತೆಯರು ಶ್ರಮಿಸುತ್ತಿದ್ದಾರೆ. ದಿನಕ್ಕೆ 6ರಿಂದ 8 ಗಂಟೆಗಳವರೆಗೆ ಕೆಲಸ ಮಾಡುವುದರ ಜತೆಗೆ, ತುರ್ತು ಸಂದರ್ಭಗಳಲ್ಲಿ ಹಗಲಿರುಳು ಲಭ್ಯವಿರಬೇಕಾಗುತ್ತದೆ. ಆದರೆ ಸೇವೆಗೆ ತಕ್ಕ ಗೌರವಧನ ಮತ್ತು ಸೌಲಭ್ಯಗಳು ಸಿಗುತ್ತಿಲ್ಲ ಎಂಬುದು ಅವರ ಪ್ರಮುಖ ಆರೋಪ.
ಮೊಬೈಲ್, ಹೆರಿಗೆ ರಜೆ ಸೇರಿದಂತೆ ಇತರೆ ಬೇಡಿಕೆಗಳು
ಗೌರವಧನ ಹೆಚ್ಚಳದ ಜೊತೆಗೆ ಗುಣಮಟ್ಟದ ಮೊಬೈಲ್ ಫೋನ್ಗಳು ಮತ್ತು ರೀಚಾರ್ಜ್ ಭತ್ಯೆ ನೀಡಬೇಕು ಎಂದು ಕಾರ್ಯಕರ್ತೆಯರು ಒತ್ತಾಯಿಸಿದ್ದಾರೆ. ಪ್ರಸ್ತುತ ಆರೋಗ್ಯ ಇಲಾಖೆಯ ಕೆಲಸಗಳನ್ನು ನಿರ್ವಹಿಸಲು ವೈಯಕ್ತಿಕ ಮೊಬೈಲ್ಗಳನ್ನೇ ಬಳಸಬೇಕಾದ ಅನಿವಾರ್ಯತೆ ಇದೆ ಎಂದು ಸಂಘ ಹೇಳಿದೆ. ಇದರೊಂದಿಗೆ ಆರು ತಿಂಗಳ ವೇತನ ಸಹಿತ ಹೆರಿಗೆ ರಜೆ ನೀಡಬೇಕು ಹಾಗೂ ಆರೋಗ್ಯ ಇಲಾಖೆಗೆ ಸಂಬಂಧಿಸದ ಇತರೆ ಕೆಲಸಗಳನ್ನು ತಮಗೆ ವಹಿಸುವುದನ್ನು ನಿಲ್ಲಿಸಬೇಕು ಎಂಬ ಬೇಡಿಕೆಗಳನ್ನೂ ಮುಂದಿಟ್ಟಿದ್ದಾರೆ. ಜೊತೆಗೆ, 2025ರ ಫೆಬ್ರವರಿಯಲ್ಲಿ ಸೇವೆಯಿಂದ ವಜಾಗೊಳಿಸಲಾದ ಆಶಾ ಸುಗಮಕಾರರನ್ನು ಮರುನೇಮಕ ಮಾಡಬೇಕು ಹಾಗೂ 2024-25ನೇ ಸಾಲಿನ ಹೆಚ್ಚುವರಿ ಮಾಸಿಕ 1,500 ರೂಪಾಯಿ ಪ್ರೋತ್ಸಾಹಧನ ಸೇರಿದಂತೆ ಎಲ್ಲ ಬಾಕಿ ಪಾವತಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರದ ಭರವಸೆ ಹುಸಿ: ಸಂಘದ ಆಕ್ರೋಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025ರ ಏಪ್ರಿಲ್ನಿಂದ ಮಾಸಿಕ ಗೌರವಧನವನ್ನು 10 ಸಾವಿರ ರೂಪಾಯಿಗೆ ಹೆಚ್ಚಿಸುವ ಭರವಸೆ ನೀಡಿದ್ದರು. ಆದರೆ ಅದು ಈವರೆಗೂ ಈಡೇರಿಲ್ಲ ಎಂದು ಸಂಘದ ಮುಖಂಡರು ಆರೋಪಿಸಿದ್ದಾರೆ. ಕಳೆದ ಒಂಬತ್ತು ವರ್ಷಗಳಲ್ಲಿ ರಾಜ್ಯ ಸರ್ಕಾರದ ವತಿಯಿಂದ ಗೌರವಧನದಲ್ಲಿ ಹೆಚ್ಚಳವಾಗಿರುವುದು ಕೇವಲ 1,500 ರೂಪಾಯಿ ಮಾತ್ರ. ನೆರೆಯ ಕೇರಳದಲ್ಲಿ ಆಶಾ ಕಾರ್ಯಕರ್ತೆಯರಿಗೆ 12 ಸಾವಿರ ರೂಪಾಯಿ ಗೌರವಧನ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಕನಿಷ್ಠ 15 ಸಾವಿರ ರೂಪಾಯಿ ನಿಗದಿತ ಗೌರವಧನ ನೀಡಲೇಬೇಕು ಎಂದು ಸಂಘ ಪಟ್ಟು ಹಿಡಿದಿದೆ.
ರಾಜ್ಯದ ಆರೋಗ್ಯ ಸೇವೆ ಮೇಲೆ ವ್ಯತಿರಿಕ್ತ ಪರಿಣಾಮ
ಆಶಾ ಕಾರ್ಯಕರ್ತೆಯರು ತಾಯಿ ಮತ್ತು ಮಕ್ಕಳ ಆರೋಗ್ಯ, ಗರ್ಭಿಣಿಯರ ಆರೈಕೆ, ಲಸಿಕಾ ಅಭಿಯಾನ, ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಹಾಗೂ ಆರೋಗ್ಯ ಸಮೀಕ್ಷೆ ಸೇರಿದಂತೆ ಹಲವು ಮಹತ್ವದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಜನರು ಮತ್ತು ಆರೋಗ್ಯ ಇಲಾಖೆಯ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ನವೆಂಬರ್ 17ರಿಂದ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸುವುದಾಗಿ ಸಂಘ ಘೋಷಿಸಿರುವ ಹಿನ್ನೆಲೆಯಲ್ಲಿ, ಇವರು ಕೆಲಸದಿಂದ ದೂರ ಉಳಿದರೆ ರಾಜ್ಯದಾದ್ಯಂತ ಪ್ರಾಥಮಿಕ ಆರೋಗ್ಯ ಸೇವೆಗಳ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಯಿದೆ. ಬೇಡಿಕೆಗಳನ್ನು ಈಡೇರಿಸುವವರೆಗೆ ಧರಣಿ ಹಿಂಪಡೆಯುವುದಿಲ್ಲ ಎಂದು ಸಂಘ ಎಚ್ಚರಿಸಿದೆ.
ಸರ್ಕಾರದ ಮುಂದಿನ ನಡೆ ಏನು?
ಆಶಾ ಕಾರ್ಯಕರ್ತೆಯರ ಹೋರಾಟ ಈಗ ರಾಜ್ಯ ಸರ್ಕಾರದ ಪಾಲಿಗೆ ಹೊಸ ಸವಾಲಾಗಿ ಪರಿಣಮಿಸಿದೆ. ಗ್ಯಾರಂಟಿ ಯೋಜನೆಗಳು ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ನಡುವೆ, ತಳಮಟ್ಟದಲ್ಲಿ ಅತ್ಯಂತ ಅಗತ್ಯ ಆರೋಗ್ಯ ಸೇವೆ ಒದಗಿಸುವ ಕಾರ್ಯಕರ್ತೆಯರ ಬೇಡಿಕೆಗಳನ್ನು ಸರ್ಕಾರ ಹೇಗೆ ನಿಭಾಯಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ನಾಳೆಯಿಂದ ಫ್ರೀಡಂ ಪಾರ್ಕ್ನಲ್ಲಿ ಆರಂಭವಾಗಲಿರುವ ಧರಣಿಗೆ ಸರ್ಕಾರ ಸ್ಪಂದಿಸಲಿದೆಯೇ? ಗೌರವಧನ ಹೆಚ್ಚಳದ ಕುರಿತು ಮಾತುಕತೆಗೆ ಮುಂದಾಗಲಿದೆಯೇ? ಬಾಕಿ ಪಾವತಿ ಮತ್ತು ಸೌಲಭ್ಯಗಳ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದೆ ಕಾದು ನೋಡಬೇಕಿದೆ.



















