ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್ಸಿಪಿ) ಎರಡು ಬಣಗಳ ವಿಲೀನದ ವದಂತಿಗಳಿಗೆ ಈಗ ತೆರೆ ಬೀಳುವ ಲಕ್ಷಣಗಳು ಕಾಣಿಸುತ್ತಿವೆ. ಅಜಿತ್ ಪವಾರ್ ಅವರ ನಿಧನದ ನಂತರ ಪಕ್ಷದ ನಾಯಕತ್ವ ವಹಿಸಿಕೊಂಡಿರುವ ಸುನೇತ್ರಾ ಪವಾರ್ ಅವರು, ಶರದ್ ಪವಾರ್ ಬಣದೊಂದಿಗೆ ಪಕ್ಷವನ್ನು ವಿಲೀನಗೊಳಿಸುವ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಈಗಾಗಲೇ ಮಹಾಯುತಿ ಮೈತ್ರಿಕೂಟದ ನಾಯಕರಿಗೆ ತಮ್ಮ ಸ್ಪಷ್ಟ ನಿಲುವನ್ನು ತಿಳಿಸಿದ್ದಾರೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.
ಅಸ್ತಿತ್ವದ ಆತಂಕ ಕಾಡಿತೇ?
ಶರದ್ ಪವಾರ್ ಬಣವು ಎನ್ಡಿಎ ಮೈತ್ರಿಕೂಟಕ್ಕೆ ಬರುವುದಾದರೆ ಸ್ವತಂತ್ರ ಪಕ್ಷವಾಗಿ ಸೇರ್ಪಡೆಯಾಗಲು ತಮ್ಮದೇನೂ ಅಭ್ಯಂತರವಿಲ್ಲ, ಆದರೆ ಎರಡೂ ಬಣಗಳ ವಿಲೀನಕ್ಕೆ ಯಾವುದೇ ಕಾರಣಕ್ಕೂ ಒಪ್ಪಿಗೆ ಇಲ್ಲ ಎಂದು ಸುನೇತ್ರಾ ಪವಾರ್ ಮಿತ್ರಪಕ್ಷಗಳಿಗೆ ಸ್ಪಷ್ಟಪಡಿಸಿದ್ದಾರೆ. ಶರದ್ ಪವಾರ್ ಬಣದೊಂದಿಗೆ ವಿಲೀನವಾದರೆ, ಪ್ರಸ್ತುತ ಬಿಜೆಪಿ ಮತ್ತು ಶಿವಸೇನೆಯೊಂದಿಗೆ ಆಡಳಿತಾರೂಢ ಮೈತ್ರಿಕೂಟದಲ್ಲಿರುವ ತಮ್ಮ ಬಣದ ಅಸ್ತಿತ್ವಕ್ಕೆ ಧಕ್ಕೆಯಾಗಬಹುದು ಎಂಬ ಆತಂಕ ಸುನೇತ್ರಾ ಪವಾರ್ ಅವರಿಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ವಿಶ್ಲೇಷಿಸಿವೆ. ಇದೇ ವೇಳೆ, ಇಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ನಿವಾಸಕ್ಕೆ ಭೇಟಿ ನೀಡಿದ ಸುನೇತ್ರಾ ಪವಾರ್ ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಕೇಂದ್ರದ ಲೆಕ್ಕಾಚಾರವೇನು?
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನವೆಂಬರ್ 16 ಮತ್ತು 17ರಂದು ಪುಣೆಗೆ ಭೇಟಿ ನೀಡಲಿದ್ದು, ಈ ವೇಳೆ ಸುನೇತ್ರಾ ಪವಾರ್ ಅವರನ್ನು ಭೇಟಿಯಾಗಿ ವಿಲೀನದ ಕುರಿತು ಚರ್ಚಿಸುವ ಸಾಧ್ಯತೆಯಿದೆ. ಈ ಮಹತ್ವದ ಭೇಟಿಗೂ ಮುನ್ನವೇ ಸುನೇತ್ರಾ ಪವಾರ್ ತಮ್ಮ ಕಠಿಣ ನಿಲುವನ್ನು ಹೊರಹಾಕಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಗಳನ್ನು ಸಂಸತ್ತಿನಲ್ಲಿ ಸುಗಮವಾಗಿ ಅಂಗೀಕರಿಸಲು ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಎರಡೂ ಬಣಗಳು ಒಂದಾಗಬೇಕು ಎಂಬುದು ಕೇಂದ್ರ ನಾಯಕರ ಆಶಯವಾಗಿದೆ ಎನ್ನಲಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ಎನ್ಸಿಪಿ (ಎಸ್ಪಿ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಅವರು ವಿಲೀನದ ಪರ ಒಲವು ಹೊಂದಿರುವ ಪ್ರಫುಲ್ ಪಟೇಲ್ ಅವರನ್ನು ಭೇಟಿಯಾಗಿದ್ದು ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ಒದಗಿಸಿದೆ.
ವಿಲೀನದ ಪ್ರಶ್ನೆಯೇ ಇಲ್ಲ ಎಂದ ಸುಪ್ರಿಯಾ ಸುಳೆ
ಮತ್ತೊಂದೆಡೆ, ವಿಲೀನದ ಎಲ್ಲಾ ಊಹಾಪೋಹಗಳನ್ನು ಸುಪ್ರಿಯಾ ಸುಳೆ ಅವರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನನ್ನ ಸಹೋದರ ಅಜಿತ್ ಪವಾರ್ ನಿಧನದ ನಂತರ, ನಮ್ಮ ಕಡೆಯಿಂದ ಈ ವಿಚಾರಕ್ಕೆ ಪೂರ್ಣವಿರಾಮ ಇಡಲಾಗಿದೆ. ವಿಲೀನದ ಕುರಿತು ಯಾವುದೇ ಮಾತುಕತೆಗಳು ನಡೆಯುತ್ತಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಅಜಿತ್ ಪವಾರ್ ಬದುಕಿದ್ದಾಗ ಆ ಕುರಿತು ಭಾವನಾತ್ಮಕವಾಗಿ ಚರ್ಚೆಗಳು ನಡೆದಿದ್ದವು, ಆದರೆ ಅವರ ಅಗಲಿಕೆಯೊಂದಿಗೆ ಆ ಅಧ್ಯಾಯವೂ ಮುಗಿದಿದೆ ಎಂದು ಸುಳೆ ಹೇಳಿದ್ದಾರೆ.
ಶರದ್ ಪವಾರ್ಗೆ ಸಂಜಯ್ ರಾವತ್ ಎಚ್ಚರಿಕೆ
ಈ ರಾಜಕೀಯ ಬೆಳವಣಿಗೆಗಳ ನಡುವೆ ಮಿತ್ರಪಕ್ಷ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಅವರು ಶರದ್ ಪವಾರ್ ಬಣಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಶರದ್ ಪವಾರ್ ಅವರ ಪಕ್ಷದಲ್ಲಿರುವ ಕೆಲವೇ ಕೆಲವು ನಾಯಕರು ಸಚಿವ ಸ್ಥಾನದ ಆಸೆಗಾಗಿ ವಿಲೀನಕ್ಕೆ ಒತ್ತಡ ಹೇರುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. “ಬೆರಳೆಣಿಕೆಯಷ್ಟು ಜನರ ಅಧಿಕಾರದ ದಾಹಕ್ಕಾಗಿ ಶರದ್ ಪವಾರ್ ಅವರು ಜೀವನಪರ್ಯಂತ ಪಾಲಿಸಿಕೊಂಡು ಬಂದ ತತ್ವಗಳನ್ನು ಬಲಿಕೊಡುವುದು ಸರಿಯಲ್ಲ. ಬಿಜೆಪಿಯ ಬೂಟು ನೆಕ್ಕುವ ಗುಂಪಿನೊಂದಿಗೆ ಚರ್ಚೆ ನಡೆಸುತ್ತಾ ಮಹಾರಾಷ್ಟ್ರದಲ್ಲಿ ಗೊಂದಲ ಮತ್ತು ಅನುಮಾನದ ವಾತಾವರಣ ಸೃಷ್ಟಿಸುವುದು ರಾಜ್ಯದ ಪರಂಪರೆಗೆ ಶೋಭೆ ತರುವುದಿಲ್ಲ” ಎಂದು ರಾವತ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಕಟುವಾಗಿ ಟೀಕಿಸಿದ್ದಾರೆ.


















