ಬೆಂಗಳೂರು: ದೇಶದ ಕೋಟ್ಯಂತರ ಜನರಿಗೆ ಉಚಿತ ಆರೋಗ್ಯ ಸೇವೆಯ ಭದ್ರತೆಯನ್ನು ಒದಗಿಸುತ್ತಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ’ಯ (AB-PMJAY) ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (NHA) ಹೊಸ ಪ್ರಸ್ತಾವನೆಯ ಪ್ರಕಾರ, ಒಟ್ಟು 112 ಪ್ರಮುಖ ಕಾಯಿಲೆಗಳು ಮತ್ತು ಶಸ್ತ್ರಚಿಕಿತ್ಸೆಗಳ ಪ್ಯಾಕೇಜ್ ಗಳನ್ನು ಕೇವಲ ಸರ್ಕಾರಿ ಆಸ್ಪತ್ರೆಗಳಿಗೆ ಮಾತ್ರ ಕಾಯ್ದರಿಸಲು ತೀರ್ಮಾನಿಸಲಾಗಿದೆ.
ಹೊಸ ನಿಯಮಗಳು ಜಾರಿಗೆ ಬಂದರೆ, ಡಿಸೆಂಬರ್ 1ರಿಂದ ಈ ನಿರ್ದಿಷ್ಟ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಕಾರ್ಡ್ ಮೂಲಕ ಉಚಿತ ಚಿಕಿತ್ಸೆ ಪಡೆಯಲು ಅವಕಾಶವಿರುವುದಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ಭರಿಸಲಾಗುವ ವೆಚ್ಚವನ್ನು ನಿಯಂತ್ರಿಸುವುದು ಮತ್ತು ಸರ್ಕಾರಿ ಆಸ್ಪತ್ರೆಗಳ ಮೂಲಭೂತ ಸೌಕರ್ಯಗಳನ್ನು ಇನ್ನಷ್ಟು ಬಲಪಡಿಸುವುದು ಇದರ ಉದ್ದೇಶ ಎಂದು ತಿಳಿದುಬಂದಿದೆ.
ಈಗ ಲಭ್ಯವಿರುವ ಮಾಹಿತಿಯಂತೆ, ಈಗಾಗಲೇ ಕೆಲವು ನಿರ್ದಿಷ್ಟ ಪ್ಯಾಕೇಜ್ ಗಳು ಸರ್ಕಾರಿ ಆಸ್ಪತ್ರೆಗಳಿಗೆ ಮೀಸಲಾಗಿದ್ದು, ಈಗ ಹೊಸದಾಗಿ 89 ಪ್ಯಾಕೇಜ್ ಗಳನ್ನು ಸೇರಿಸುವುದರೊಂದಿಗೆ ಒಟ್ಟು ಸಂಖ್ಯೆ 112 ತಲುಪಿದೆ. ಈ ನಿರ್ಧಾರದಿಂದಾಗಿ ರೋಗಿಗಳು ನೇರವಾಗಿ ಸರ್ಕಾರಿ ಆಸ್ಪತ್ರೆಗಳ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವೆಲ್ಲ ರೋಗ ಮತ್ತು ಚಿಕಿತ್ಸೆಗಳು ಸೇರಿವೆ?
ಈ ಹೊಸ ನಿಯಮದಡಿ ಸ್ತ್ರೀರೋಗ, ಸಾಮಾನ್ಯ ಶಸ್ತ್ರಚಿಕಿತ್ಸೆ, ಮಾನಸಿಕ ಆರೋಗ್ಯ, ಕಣ್ಣಿನ ಚಿಕಿತ್ಸೆ ಹಾಗೂ ಕಿವಿ, ಮೂಗು, ಗಂಟಲು (ENT) ವಿಭಾಗಗಳಿಗೆ ಸಂಬಂಧಿಸಿದ ಅನೇಕ ಪ್ರಮುಖ ಚಿಕಿತ್ಸೆಗಳು ಬರುತ್ತವೆ. ಪ್ರಮುಖವಾಗಿ ಹೈ-ರಿಸ್ಕ್ ಹೆರಿಗೆ, ತೀವ್ರ ರಕ್ತಹೀನತೆ, ಲಿವರ್ ಕಾಯಿಲೆ, ಮೇದೋಜ್ಜೀರಕ ಗ್ರಂಥಿಯ ಉರಿಯೂತ, ಮಲೇರಿಯಾ, ಡೆಂಘೀ/ಚಿಕ್ಕುನ್ಗುನ್ಯಾ, ಮೈಗ್ರೇನ್, ಆತಂಕ, ಕಣ್ಣಿನ ಪೊರೆ ಹಾಗೂ ಗರ್ಭಕೋಶದ ಶಸ್ತ್ರಚಿಕಿತ್ಸೆಗಳು ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿರಲಿವೆ.


















