ರಾಯಚೂರು ಜಿಲ್ಲೆಯ ಮದರಸಾವೊಂದರಲ್ಲಿ ಬಾಲಕನ ಮೇಲೆ ಶಿಕ್ಷಕನಿಂದ ಬರ್ಬರ ಹಲ್ಲೆ ನಡೆದಿದ್ದು, ಅಂತಿಮವಾಗಿ ಶಿಕ್ಷಕ ಅಬ್ಬಾಸ್ ಸೇರಿದಂತೆ 6 ಜನರ ಮೇಲೆ ಕವಿತಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸರಿಯಾಗಿ ಓದಲು ಬರುವುದಿಲ್ಲ ಎಂದು ಆರೋಪಿ ಅಬ್ಬಾಸ್ ಬಾಲಕನ ಬಾಯಲ್ಲಿ ಬಟ್ಟೆ ತುರುಕಿ, ಕೈ-ಕಾಲು ಕಟ್ಟಿಹಾಕಿ ಮನಬಂದಂತೆ ಹಲ್ಲೆ ನಡೆಸಿದ್ದಾನೆ.
ಹಲ್ಲೆ ಮಾಡಿದ ವಿಚಾರವನ್ನು ಪೋಷಕರಿಗೆ ತಿಳಿಸದಂತೆ ಇತರೆ ಶಿಕ್ಷಕರು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹಟ್ಟಿ ಪಟ್ಟಣದ ಪೋಷಕರು ಕವಿತಾಳದ ಮದರಸಾಗೆ ಬಾಲಕನನ್ನು ಓದಲು ಬಿಟ್ಟಿದ್ದರು. ಮಗನನ್ನು ಮಾತನಾಡಿಸಲು ಪೋಷಕರು ಹೋದಾಗ ಈ ಕ್ರೌರ್ಯ ಬೆಳಕಿಗೆ ಬಂದಿದೆ. ಬಾಲಕ ಅಳುತ್ತಾ ಬಂದು ತಂದೆ-ತಾಯಿಯನ್ನು ತಬ್ಬಿಕೊಂಡಿದ್ದು, ಕಣ್ಣುಗಳಲ್ಲಿ ರಕ್ತ ಹೆಪ್ಪುಗಟ್ಟಿ, ಮೈಮೇಲೆಲ್ಲಾ ಬಾಸುಂಡೆಗಳಾಗಿದ್ದವು. ಹಲ್ಲೆಯ ಭೀಕರತೆ ಕಂಡು ಪೋಷಕರು ಹಾಗೂ ಸಾರ್ವಜನಿಕರು ಶಾಕ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.















