ಬೆಂಗಳೂರಿನಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ ಒಂದರ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ವೇಳೆ ಸಚಿವರ ಎದುರೇ ಹೈಡ್ರಾಮಾ ನಡೆದಿದೆ. ಟಿನ್ ಫ್ಯಾಕ್ಟರಿ ಬಳಿ ಸಚಿವ ಕೃಷ್ಣ ಬೈರೇಗೌಡರು ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದಾಗ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಕಿತ್ತಾಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ, ಶಾಸಕರು ಕೆಲಸ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಾಂಗ್ರೆಸ್ ಮಾಜಿ ಎಂಎಲ್ಸಿ ನಾರಾಯಣಸ್ವಾಮಿ ಹಾಗೂ ಶಾಸಕ ಬೈರತಿ ಬಸವರಾಜು ನಡುವೆ ತೀವ್ರ ಗಲಾಟೆ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ‘ಹೇ ನಿನ್ನ ಎಂಎಲ್ಸಿ ಮಾಡಿದ್ದು ನಾನೋ? ಅದನ್ನ ಮರೆತು ಈಗ ಕಿರಿಕ್ ಮಾಡ್ತೀಯಾ?’ ಎಂದು ಶಾಸಕ ಬೈರತಿ ಬಸವರಾಜು ಅವರು ನಾರಾಯಣಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದರು. ತಕ್ಷಣ ಸಚಿವ ಕೃಷ್ಣ ಬೈರೇಗೌಡರು ಮಧ್ಯಪ್ರವೇಶಿಸಿ, ‘ಅವರೂ ಮಾಡಿದ್ದು ತಪ್ಪು, ನಿಮ್ಮವರು ಮಾಡಿದ್ದು ತಪ್ಪು, ಆಯ್ತು ಇದನ್ನ ಇಲ್ಲಿಗೆ ಬಿಟ್ಟಾಕಿ, ಅಭಿವೃದ್ಧಿ ಕೆಲಸದ ಕಡೆ ಗಮನ ಕೊಡಿ’ ಎಂದು ಇಬ್ಬರನ್ನೂ ಸಮಾಧಾನಪಡಿಸಿದರು.

















