ಬೆಂಗಳೂರಿನಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿದೆ. ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿಗೆ ಜನಸಾಗರವೇ ಹರಿದುಬಂದಿದೆ.ಕೆ.ಆರ್. ಮಾರ್ಕೆಟ್ ಮತ್ತು ಮಲ್ಲೇಶ್ವರಂ ಸುತ್ತಮುತ್ತ ಭಾರೀ ಜನದಟ್ಟಣೆ ಉಂಟಾಗಿದೆ. ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.
ಹೂವುಗಳ ಬೆಲೆ ಏರಿಕೆಯ ನಡುವೆಯೂ ಗ್ರಾಹಕರು ಖರೀದಿಗೆ ಮುಂದಾಗಿದ್ದಾರೆ. ಚೆಂಡು ಹೂ ಹಾಗೂ ಸೇವಂತಿ ಸೇರಿದಂತೆ ವಿವಿಧ ಹೂಗಳ ದರದಲ್ಲಿ ಹೆಚ್ಚಳವಾಗಿದೆ.ಹಣ್ಣುಗಳ ಬೆಲೆಯೂ ಗಗನಕ್ಕೇರಿದೆ. ಏಲಕ್ಕಿ ಬಾಳೆಹಣ್ಣು ಕೆ.ಜಿ.ಗೆ 150 ರಿಂದ 180 ರೂಪಾಯಿ ಇದೆ. ಸೇಬು ಹಾಗೂ ದಾಳಿಂಬೆ ಕೆ.ಜಿ.ಗೆ 250 ರಿಂದ 300 ರೂಪಾಯಿ ವರೆಗೆ ಮಾರಾಟವಾಗುತ್ತಿವೆ. ಮೋಸಂಬಿ ಕೆ.ಜಿ.ಗೆ 150 ರೂಪಾಯಿ ಇದೆ.
ಒಂದು ತೆಂಗಿನಕಾಯಿಗೆ 40 ರಿಂದ 50 ರೂಪಾಯಿ ಹಾಗೂ ನಾಲ್ಕು ನಿಂಬೆಹಣ್ಣುಗಳಿಗೆ 40 ರೂಪಾಯಿ ಇದೆ. ಪೂಜೆಗೆ ಅಗತ್ಯವಾದ ಬಾಳೆಕಂದು ಜೋಡಿಗೆ 100 ರೂಪಾಯಿ ಹಾಗೂ ಮಾವಿನ ತೋರಣ ಒಂದಕ್ಕೆ 40 ರೂಪಾಯಿ ಇದೆ.ಮಣ್ಣಿನ ಹಣತೆಗಳಿಗೂ ಬೇಡಿಕೆ ಹೆಚ್ಚಾಗಿದೆ. ಗಾತ್ರಕ್ಕೆ ಅನುಗುಣವಾಗಿ ಹಣತೆ ಡಜನ್ಗೆ 50 ರಿಂದ 150 ರೂಪಾಯಿ ವರೆಗೆ ಇದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೂ ಜನರು ಹಬ್ಬದ ಖರೀದಿಯಲ್ಲಿ ತೊಡಗಿದ್ದಾರೆ.
















