ಹಾಸನದಲ್ಲಿ ಸಾರ್ವಜನಿಕ ದರ್ಶನದ ಐದನೇ ದಿನವೂ ಹಾಸನಾಂಬ ದೇವಿಯ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹರಿದುಬರುತ್ತಿದ್ದು, ನೆರೆದಿರುವ ಜನಸ್ತೋಮ ನಿರೀಕ್ಷೆಗೂ ಮೀರಿದೆ. ಧರ್ಮ ದರ್ಶನದ ಸಾಲಿನಲ್ಲಿ ಭಕ್ತರಿಗೆ ದರ್ಶನಕ್ಕೆ 7ರಿಂದ 8 ಗಂಟೆಗಳ ಕಾಲ ವಿಳಂಬವಾಗುತ್ತಿದ್ದರೆ, 300 ರೂ. ಸಾಲಿನಲ್ಲಿ 2 ಕಿಲೋಮೀಟರ್‌ವರೆಗೂ ಭಕ್ತರು ನಿಂತಿದ್ದಾರೆ ಹಾಗೂ 1000 ರೂ. ಸಾಲಿನಲ್ಲಿ ಕೊಂಚ ಕಡಿಮೆಯಿದೆ.
ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಧಾನ ಅರ್ಚಕ ನಾಗರಾಜ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಮನವಿ ಮಾಡಿದ್ದು, ಅದಕ್ಕೆ ಸ್ಪಂದಿಸಿ ಮುಂಜಾನೆ 3ರಿಂದ 6 ಗಂಟೆಯವರೆಗೆ ನೈವೇದ್ಯಕ್ಕಾಗಿ ಗರ್ಭಗುಡಿ ಬಾಗಿಲು ಮುಚ್ಚದೆ ನಿನ್ನೆ ಮಧ್ಯಾಹ್ನ 3.30ರಿಂದ ಇಂದು ಮಧ್ಯಾಹ್ನ 2 ಗಂಟೆಯವರೆಗೆ ನಿರಂತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.


















