ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆಯೇ ಮಲ್ಲೇಶ್ವರಂನಲ್ಲಿ ಫಿಟ್ ಇಂಡಿಯಾ – ಫಿಟ್ ಮಲ್ಲೇಶ್ವರಂ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಮಲ್ಲೇಶ್ವರಂನ 15ನೇ ಕ್ರಾಸ್ನ ಬೀಗಲ್ ಕ್ರೀಡಾಂಗಣದಲ್ಲಿ ಆಧುನಿಕ ವ್ಯಾಯಾಮ ಉಪಕರಣಗಳೊಂದಿಗೆ ಸಜ್ಜುಗೊಂಡಿರುವ ನೂತನ ಬೀಗಲ್ಸ್ ಜಿಮ್ ಉದ್ಘಾಟನೆಗೊಂಡಿದೆ.
ಮಾಜಿ ಡಿಸಿಎಂ ಹಾಗೂ ಮಲ್ಲೇಶ್ವರಂ ಶಾಸಕ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಜಿಮ್ ಟ್ರೈನರ್ ದಿಲೀಪ್ ಅವರೊಂದಿಗೆ ಜಿಮ್ನ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿದ ಶಾಸಕರು, ಸ್ವತಃ ಡಂಬಲ್ಸ್ ಎತ್ತಿ ವ್ಯಾಯಾಮ ಮಾಡುವ ಮೂಲಕ ಫಿಟ್ನೆಸ್ ಬಗ್ಗೆ ಎಲ್ಲರ ಗಮನ ಸೆಳೆದರು. ಈ ವೇಳೆ ವ್ಯಾಯಾಮದಿಂದ ಆರೋಗ್ಯ ಕಾಪಾಡಿಕೊಳ್ಳುವ ಮಹತ್ವವನ್ನು ವಿಶ್ಲೇಷಿಸಿದ ಅವರು, ಇಂದಿನ ಯುವಜನತೆ ದೈಹಿಕವಾಗಿ ಸದೃಢರಾಗಬೇಕು ಮತ್ತು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂಬ ಸಂದೇಶ ನೀಡಿದರು.
ಸ್ಥಳೀಯ ನಿವಾಸಿಗಳಿಗೆ ಉತ್ತಮ ಜಿಮ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಹೊಸ ಪ್ರಯತ್ನ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ಜರುಗಿತು ಹಾಗೂ ಮಕ್ಕಳು ಅಶ್ವತ್ಥ್ ನಾರಾಯಣ್ ಅವರಿಗೆ ಚಿತ್ರ ನೀಡಿ ಗೌರವಿಸಿದರು.


















